ಚನ್ನಮ್ಮನ ಕಿತ್ತೂರು: ಅ.19 ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಮತಹಕ್ಕಿನ ಠರಾವು ತೆಗೆದುಕೊಳ್ಳಲು ಸೋಮವಾರ ಕರೆಯಲಾಗಿದ್ದ ಸಭೆಯಲ್ಲಿ ತಾಲ್ಲೂಕಿನ ಹುಲಿಕಟ್ಟಿ, ಅಂಬಡಗಟ್ಟಿಯ ಸಂಘದ ಒಳಗೆ ಮತ್ತು ಹೊರಗೆ, ಮಾತಿನ ಚಕಮಕಿ, ಗಲಾಟೆ, ಪೊಲೀಸರ ವಿರುದ್ಧ ಪ್ರತಿಭಟನೆ, ಧಿಕ್ಕಾರ ಘೋಷಣೆ ಮೊಳಗಿದವು. ಕಿತ್ತೂರಿನ ಸಂಘದಲ್ಲಿ ಒಳಗೆ ಕೂಗಾಟ ನಡೆದರೂ ಶಾಂತರೀತಿಯಿಂದ ಮುಕ್ತಾಯವಾಯಿತು.
‘12 ನಿರ್ದೇಶಕರ ಬಲದ ತಾಲ್ಲೂಕಿನ ಅಂಬಡಗಟ್ಟಿಯ ಸಂಘದಲ್ಲಿ ಬ್ಯಾಂಕ್ ನಿರೀಕ್ಷಕ ಸೇರಿ ಆರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದರು. ಸಭೆ ನಡೆಯಲು ಏಳು ನಿರ್ದೇಶಕರ ಕೋರಂ ಬೇಕಾಗಿತ್ತು. ಆರು ನಿರ್ದೇಶಕರು ಇದ್ದರೂ ಮುಖ್ಯ ಕಾರ್ಯನಿರ್ವಾಹಕರ ಮೇಲೆ ಒತ್ತಡ ತಂದು ಸಭೆ ನಡೆಸಿ, ಮತಹಕ್ಕಿನ ಠರಾವು ತೆಗೆದುಕೊಂಡಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
‘12 ನಿರ್ದೇಶಕರ ಬೆಂಬಲದ ತಾಲ್ಲೂಕಿನ ಹುಲಿಕಟ್ಟಿಯ ಸಂಘದಲ್ಲಿ ಏಳು ಜನ ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದಾರೆ. ಅಲ್ಲಿಯ ಬಿಜೆಪಿ ಬೆಂಬಲಿತ ನಿರ್ದೇಶಕರೊಬ್ಬರಿಗೆ ಎಸ್ಐ ಪ್ರವೀಣ ಗಂಗೋಳ ಅವರು ಬೆದರಿಕೆ ಹಾಕಿ ಕಾಂಗ್ರೆಸ್ ಕಡೆಗೆ ಬೆಂಬಲ ಸೂಚಿಸುವಂತೆ ಮಾಡಿದರು. ಬ್ಯಾಂಕ್ ನಿರೀಕ್ಷಕ ಬೆಂಬಲ ಸೇರಿಕೊಂಡು ಈ ಸಂಘವು ಕಾಂಗ್ರೆಸ್ ಕಡೆಗೆ ವಾಲಿತು’ ಎಂದು ಈ ಸಂಘದ ಅಧ್ಯಕ್ಷ ಭರತ ಸಂಪಗಾಂವ ಆರೋಪಿಸಿದರು.
ಇದರಿಂದ ಹೊರಗಿದ್ದ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿದ್ದ ಡಿವೈಎಸ್‌ಪಿ ವೀರಯ್ಯ ಹಿರೇಮಠ ಅವರಿಗೆ ಹಠಾತ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎಸ್ಐ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದರು.
ಕಿತ್ತೂರಿನ ಸಂಘದಲ್ಲಿ ಯಾವುದೇ ಗಲಾಟೆಯಿಲ್ಲದೆ, ಬಿಜೆಪಿ ಪರ ಅಭ್ಯರ್ಥಿಗೆ ಮತ ಹಾಕುವ ಠರಾವನ್ನು 8-4 ನಿರ್ದೇಶಕರ ಬೆಂಬಲದೊಂದಿಗೆ ಪಾಸು ಮಾಡಲಾಯಿತು ಎಂದು ಸಂಘದ ಮೂಲ ತಿಳಿಸಿದೆ. ಅಂಬಡಗಟ್ಟಿಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಠರಾವು ಸಭೆ ಮುಗಿದ ನಂತರ ಹುಲಕಟ್ಟಿ, ಅಂಬಡಗಟ್ಟಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಮತ್ತು ನಿರ್ದೇಶಕರನ್ನು ಕಾಂಗ್ರೆಸ್ ಬೆಂಬಲಿತರು ಎನ್ನಲಾದ ವ್ಯಕ್ತಿಗಳು ವಾಹನದಲ್ಲಿ ಕರೆದುಕೊಂಡು ಹೋದರು.
ಮೂರೂ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.