ADVERTISEMENT

ವಿದ್ಯುತ್ ಅವಘಡ: ಮಹಡಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 15:41 IST
Last Updated 19 ಸೆಪ್ಟೆಂಬರ್ 2022, 15:41 IST

ವಿದ್ಯುತ್ ಅವಘಡ: ಮಹಡಿಗೆ ಬೆಂಕಿ

ಸವದತ್ತಿ: ಇಲ್ಲಿನ ರಾಮಾಪುರ ಬಡಾವಣೆಯಲ್ಲಿ ಗೃಹರಕ್ಷಕ ದಳ ಸಿಬ್ಬಂದಿ ಪ್ರಕಾಶ ಶಿರಹಟ್ಟಿ ಅವರ ಮನೆಯಲ್ಲಿ ಸೋಮವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ.

ಮೊದಲ ಮಹಡಿಯಲ್ಲಿದ್ದ ಝರಾಕ್ಸ್ ಮಷಿನ್‍ಗೆ ವಿದ್ಯುತ್‌ ತಂತಿ ತಗಲಿ ಪೇಪರ್‌ಗಳಿಗೆ ಬೆಂಕಿ ಹೊತ್ತಿಕೊಂಡಿತು. ನಂತರ ಇಡೀ ಮಹಡಿಗೆ ಆವರಿಸಿಕೊಂಡಿತು. ಇದರಂದ ಅಪಾರ ಪ್ರಮಾಣದ ಸಾಮಗ್ರಿಗಳು ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಪಕ್ಕದ ಮನೆಗಳಿಗೆ ತಗಲದಂತೆ ಎಚ್ಚರ ವಹಿಸಿದರು.

*

ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿ ಸಾವು

ರಾಮದುರ್ಗ: ತಾಲ್ಲೂಕಿನ ರೇವಡಿಕೊಪ್ಪ ಗ್ರಾಮದಲ್ಲಿ ಸೋಮವರ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.

ಸುರೇಬಾನ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರರಾಗಿದ್ದ ರೇವಡಿಕೊಪ್ಪ ಗ್ರಾಮದ ತಿಮ್ಮಣ್ಣ ಸಿದ್ದಲಿಂಗಪ್ಪ ಪೈಲಿ (40) ಸಾವಿಗೀಡಾದವರು. ಸೋಮವಾರ ಹೊಲದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ತಿಮ್ಮಣ್ಣ ಮರಳಿ ಬಂದಿರಲಿಲ್ಲ. ಇದರಿಂದ ಅವರ ತಾಯಿ ಜಮೀನಿಗೆ ಹೋಗಿ ನೋಡಿದಾಗ ಮರಕ್ಕೆ ದೇಹ ನೇತಾಡುವುದು ಕಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*

ವ್ಯಕ್ತಿ ಮೇಲೆ ಹಲ್ಲೆ: ನಾಲ್ವರ ವಶ

ಬೆಳಗಾವಿ: ತಾಲ್ಲೂಕಿನ ಅಂಬೆವಾಡಿಯಲ್ಲಿ ಭಾನುವಾರ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣದ ಸಂಬಂಧ ಪೊಲೀಸರು ಸೋಮವಾರ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಗಂಗಾರಾಮ ತರಳೆ, ಶಾಂತಾ ತರಳೆ, ದಶರಥ ತರಳೆ ಹಾಗೂ ಉಮೇಶ ತರಳೆ ವಶಕ್ಕೆ ಪಡೆದವರು. ಗಾಯಗೊಂಡ ಮನೋಹರ ತರಳೆ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಖಾಲಿ ಜಮೀನಿನಲ್ಲಿ ಎಮ್ಮೆ ಮೇಯಿಸಬೇಡ ಎಂದಿದ್ದಕ್ಕೆ ನಾಲ್ವರೂ ಸೇರಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.