
ಫಕ್ಕೀರಪ್ಪ ಚಲವಾದಿ
ಬೆಳಗಾವಿ: ‘ಜಿಲ್ಲೆಯಲ್ಲಿ ನಕಲಿ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಕ್ರಮ ವಹಿಸಿದೆ. ಏಪ್ರಿಲ್ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ₹2.78 ಕೋಟಿ ಮೌಲ್ಯದ ನಕಲಿ ಮತ್ತು ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ’ ಎಂದು ಅಬಕಾರಿ ಜಂಟಿ ಆಯುಕ್ತ ಫಕ್ಕೀರಪ್ಪ ಚಲವಾದಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 126 ಘೋರ ಪ್ರಕರಣ ಮತ್ತು 380 ಪ್ರಕರಣ ದಾಖಲಿಸಲಾಗಿದೆ. ಐದು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸದ ಪ್ರಕರಣಗಳಲ್ಲಿ, ಆರೋಪಿಗಳನ್ನು ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ’ ಎಂದರು.
‘ಅಕ್ರಮ ಮದ್ಯ ಮಾರಾಟಕ್ಕಾಗಿ ದಾಖಲಿಸಿದ ಪ್ರಕರಣಗಳಲ್ಲಿ ನಾಲ್ಕು ಮಂದಿ ನಿರಂತರ ಅಪರಾಧಿಗಳಾಗಿದ್ದರು. ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ನಿಯಮ ಉಲ್ಲಂಘಿಸಿದ ಹೋಟೆಲ್‌ಗಳು ಮತ್ತು ಧಾಬಾಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.
‘ಗೋವಾ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಮೇಲೂ ನಿಗಾ ಇರಿಸಿದ್ದು, ಈಚೆಗೆ ಬೆಳಗಾವಿ ತಾಲ್ಲೂಕಿನ ಕಿಣಯೇ ಗ್ರಾಮದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.
‘ಬಾರ್ ಮಾಲೀಕರ ವಿರುದ್ಧ ಪ್ರಕರಣ’
‘ಬಾರ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುವಲ್ಲಿ ವಯಸ್ಸಿನ ನಿರ್ಬಂಧಗಳಿವೆ. ರಾಯಬಾಗದಲ್ಲಿ ಅಪ್ರಾಪ್ತ ಬಾಲಕನೊಬ್ಬ ಕುಟುಂಬ ಸದಸ್ಯರೊಂದಿಗೆ ಮದ್ಯ ಸೇವಿಸಿದ ಪ್ರಕರಣ ಗಮನಕ್ಕೆ ಬಂದಿದೆ. ಷರತ್ತು ಉಲ್ಲಂಘಿಸಿದ್ದಕ್ಕಾಗಿ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಚಲವಾದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.