ADVERTISEMENT

ಸೈಬರ್ ಕ್ರೈಂ ಮಾಡಿ ಹಣ ವಂಚನೆ: ಬೆಳಗಾವಿ ಪೊಲೀಸರ ಭರ್ಜರಿ ಭೇಟೆ– 33 ಆರೋಪಿಗಳ ಬಂಧನ

ದೇಶದ ವಿವಿಧ ರಾಜ್ಯಗಳ 33 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 15:52 IST
Last Updated 13 ನವೆಂಬರ್ 2025, 15:52 IST
<div class="paragraphs"><p>ಬೆಳಗಾವಿಯಲ್ಲಿ ನಕಲಿ ಕಾಲ್‌ ಸೆಂಟರ್ ತೆರೆದು ಅಮೆರಿಕದ ನಾಗರಿಕರನ್ನು ವಂಚಿಸುತ್ತಿದ್ದ ಜಾಲವನ್ನು ಭೇದಿಸಿದ ನಗರ ಪೊಲೀಸ್‌ ಅಧಿಕಾರಿಗಳು, ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದರು. ನಗರ ಪೊಲೀಸ್‌ ಆಯುಕ್ತ ಭೂಷಣ ಬೊರಸೆ, ಡಿಸಿ‍ಪಿ ನಾರಾಯಣ ಭರಮನಿ ಅವರೂ ವಸ್ತು ಪ್ರದರ್ಶನ ಮಾಡದರು  </p></div>

ಬೆಳಗಾವಿಯಲ್ಲಿ ನಕಲಿ ಕಾಲ್‌ ಸೆಂಟರ್ ತೆರೆದು ಅಮೆರಿಕದ ನಾಗರಿಕರನ್ನು ವಂಚಿಸುತ್ತಿದ್ದ ಜಾಲವನ್ನು ಭೇದಿಸಿದ ನಗರ ಪೊಲೀಸ್‌ ಅಧಿಕಾರಿಗಳು, ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದರು. ನಗರ ಪೊಲೀಸ್‌ ಆಯುಕ್ತ ಭೂಷಣ ಬೊರಸೆ, ಡಿಸಿ‍ಪಿ ನಾರಾಯಣ ಭರಮನಿ ಅವರೂ ವಸ್ತು ಪ್ರದರ್ಶನ ಮಾಡದರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಬೆಳಗಾವಿಯಲ್ಲೇ ಕುಳಿತು ಅಮೆರಿಕದ ನಾಗರಿಕರನ್ನು ‘ಡಿಜಿಟಲ್‌ ಅರೆಸ್ಟ್‌’ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಪ್ರಕರಣವನ್ನು ನಗರದ ಪೊಲೀಸರು ಗುರುವಾರ ಭೇದಿಸಿದ್ದಾರೆ. ವಿವಿಧ ರಾಜ್ಯಗಳ 33 ಆರೋಪಿಗಳನ್ನು ಬಂಧಿಸಿದ್ದು, 37 ಹೈಟೆಕ್‌ ಲ್ಯಾಪ್‌ಟಾಪ್‌, 37 ಮೊಬೈಲ್‌ ಫೋನ್‌ ವಶಕ್ಕೆ ಪಡೆದಿದ್ದಾರೆ.

ADVERTISEMENT

ಅಸ್ಸೊಂ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ, ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ನಾಗಾಲ್ಯಾಂಡ್‌ ರಾಜ್ಯಗಳಿಗೆ ಸೇರಿದ 32 ಮಂದಿ ಹಾಗೂ ನೇಪಾಳ ದೇಶದ ಒಬ್ಬ ಪ್ರಜೆಯನ್ನೂ ಬಂಧಿಸಲಾಗಿದೆ. ಡಿಜಿಟಲ್‌ ಹ್ಯಾಕ್‌ನಲ್ಲಿ ನಿಪುಣರಾದ ಎಲ್ಲರೂ ಒಂದೆಡೆ ಸೇರಿಕೊಂಡು ಬೆಳಗಾವಿ ಕೇಂದ್ರಿತವಾಗಿ ಈ ದೊಡ್ಡ ಹಗರಣ ನಡೆಸುತ್ತಿದ್ದರು.

ಇವರೆಲ್ಲರ ‘ಮಾಸ್ಟರ್‌ ಮೈಂಡ್‌’ಗಳು ಎನ್ನಲಾದ ಇಬ್ಬರು ಗುಜರಾತ್ ಹಾಗೂ ಪಶ್ಚಿಮಬಂಗಾಳದಲ್ಲಿ ಇದ್ದಾರೆ. ಅವನ ಬಂಧನವಾಗಬೇಕಿದೆ.

ನಗರದ ಬಾಕ್ಸೈಟ್‌ ರಸ್ತೆಯಲ್ಲಿರುವ ಕುಮಾರ್‌ ಹಾಲ್‌ನಲ್ಲಿ ‘ಅಂತರರಾಷ್ಟ್ರೀಯ ಕಾಲ್‌ ಸೆಂಟರ್‌’ ತೆರೆಯಲಾಗಿತ್ತು. ಇಲ್ಲಿ ಕೆಲಸಕ್ಕೆಂದು ಹಲವರನ್ನು ನೇಮಕ ಮಾಡಿಕೊಂಡಿದ್ದರು. ಅವರಿಗೆ ಪ್ರತಿ ತಿಂಗಳು ಕನಿಷ್ಠ ₹18 ಸಾವಿರದಿಂದ ₹45 ಸಾವಿರದವರೆಗೆ ಸಂಬಳ ಇತ್ತು. ಉಚಿತ ಊಟ, ವಸತಿ ಒದಗಿಸಲಾಗಿತ್ತು. ಇದರ ಚಟುವಟಿಕೆಗಳ ಬಗ್ಗೆ ಅನುಮಾನ ಬಂದ ನಾಗರಿಕರೊಬ್ಬರು ನಗರ ಪೊಲೀಸ್‌ ಕಮಿಷನರ್‌ಗೆ ಪತ್ರ ಬರೆದಿದ್ದರು. ಅನಾಮಧೇಯ ಪತ್ರ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ, ಈ ದೊಡ್ಡ ಅಪರಾಧ ಜಾಲ ಪತ್ತೆಯಾಗಿದೆ.

‘ಈ ನಕಲಿ ಕಾಲ್‌ ಸೆಂಟರ್‌ನ ಉದ್ಯೋಗಿಗಳು ಅಮೆರಿಕದ ನಾಗರಿಕರನ್ನು ಮಾತ್ರ ಗುರಿಯಾಗಿಸಿ ಕಾರ್ಯಾಚರಣೆ ಮಾಡಿದ್ದಾರೆ. ಇವರ ಜಾಲಕ್ಕೆ ಸಿಕ್ಕಿಕೊಂಡು ಹಣ ಕಳೆದುಕೊಂಡವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ. ಒಬ್ಬೊಬ್ಬ ಉದ್ಯೋಗಿ ದಿನಕ್ಕೆ ಕನಿಷ್ಠ 100 ಮೊಬೈಲ್‌ ಕರೆ ಮಾಡುತ್ತಿದ್ದ. ಇವರ ನೆರವಿಗೆ ಅಮೆರಿಕದಲ್ಲೂ ಒಂದು ತಂಡ ಕೆಲಸ ಮಾಡಿದ ಸಾಧ್ಯತೆ ಇದೆ. ಆ ತಂಡದ ಮೂಲಕವೇ ಮೊಬೈಲ್‌ ನಂಬರ್‌, ಮನೆ ವಿಳಾಸ, ಬ್ಯಾಂಕ್‌ ವಿವರ ಪಡೆದುಕೊಂಡಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ಮಾಹಿತಿ ನೀಡಿದರು.

‘ಈ ಕಂಪನಿಯಲ್ಲಿ ಒಂದು ಬ್ಯಾಚ್‌ ಈಗಾಗಲೇ ಟಾರ್ಗೆಟ್‌ ಮುಗಿಸಿ ಹೋಗಿದೆ. ಸದ್ಯ ಎರಡನೇ ಬ್ಯಾಚ್‌ ಕೆಲಸ ಮಾಡುತ್ತಿತ್ತು. ದಾಳಿಯ ವೇಳೆ ಐಫೋರ್–ಸಿ ಹಾಗೂ ಐಟಿ ಫರ್ಮ್ ಸಹಾಯ ಪಡೆದಿದ್ದೇವೆ. ಹೆಚ್ಚಿನ ತನಿಖೆಗೆ ಸಿಐಡಿ ನೆರವನ್ನೂ ಪಡೆಯಲಾಗುವುದು. ಸದ್ಯ ಅನಧಿಕೃತವಾಗಿ ಗುರುತು ಪತ್ತೆ ಅಪರಾಧ ಮತ್ತು ಚೀಟಿಂಗ್ ಬೈ ಪರ್ಸೂಲೇಷನ್ 66(ಎ), 66(ಬಿ), 75, 77, 48 ಮತ್ತು 49, 42ನೇ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೊಂದು ಸಂಘಟಿತ ಅಪರಾಧ’ ಎಂದು ಅವರು ಹೇಳಿದರು.

‘ಎಷ್ಟು ಜನರಿಗೆ ಮೋಸ ಮಾಡಿದ್ದಾರೆ, ಎಷ್ಟು ಹಣ ಸಂದಾಯ ಆಗಿದೆ ಎಂಬುದು ತನಿಖೆಯಾಗಬೇಕು. ಬ್ಯಾಂಕಿಂಗ್‌ ವಿವರಗಳನ್ನು ‘ಡಾರ್ಕ್‌ನೆಟ್‌’ನಲ್ಲಿ ಪಡೆದಿದ್ದಾರೋ ಅಥವಾ ಅಮೆರಿಕದ ತಂಡ ನೀಡಿದೆಯೋ ಗೊತ್ತಾಗಬೇಕಿದೆ. ಹವಾಲಾ ಮುಖಾಂತರ ಹಣ ವರ್ಗಾವಣೆ ಆಗಿದೆಯೇ ಎಂಬುದನ್ನೂ ಗಮನಿಸುತ್ತಿದ್ದೇವೆ. ಈ ಬಗ್ಗೆ ಇದೂವರೆಗೆ ಅಮೆರಿಕದ ಪೊಲೀಸರನ್ನು ಸಂಪರ್ಕಿಸಲು ಆಗಿಲ್ಲ’ ಎಂದೂ ಕಮಿಷನರ್‌ ತಿಳಿಸಿದರು.

ಹೇಗೆ ವಂಚಿಸುತ್ತಿದ್ದರು?

‘ಮನೆ ಆರ್ಡರ್‌, ಗಿಫ್ಟ್‌ ಕಾರ್ಡ್‌ಗಳು, ವಸ್ತುಗಳನ್ನು ಆನ್‌ಲೈನ್‌ ಮೂಲಕ ಖರೀದಿ ಮಾಡಿದ್ದೀರಿ, ಅದರ ಹಣ ಪಾವತಿಸಿ ಎಂದು ಕೇಳುತ್ತಿದ್ದರು. ಅತ್ತ ಅಮೆರಿಕದ ನಾಗರಿಕರು ತಾವು ಯಾವುದೇ ವಸ್ತು ಖರೀದಿ ಮಾಡಿಲ್ಲ ಎಂದು ಉತ್ತರಿಸಿದಾಗ, ನಿಮ್ಮ ಆರ್ಡರ್‌ ಕ್ಯಾನ್ಸಲ್‌ ಮಾಡಬೇಕೆಂದರೆ ಇಂತಿಷ್ಟು ದಂಡದ ಹಣ ಪಾವತಿಸಬೇಕು. ಪಾವತಿಸದಿದ್ದರೆ ನಿಮ್ಮ ಬ್ಯಾಂಕ್‌ ಖಾತೆಯಿಂದ ನೇರವಾಗಿ ಹಣ ಕಡಿತವಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು. ಹೆಚ್ಚು ಹಣ ಕಳೆದುಕೊಳ್ಳುವ ಬದಲು ಸ್ವಲ್ಪ ಕೊಟ್ಟರಾಯಿತು ಎಂದು ಹಲವು ನಾಗರಿಕರು ಆನ್‌ಲೈನ್‌ ಮೂಲಕ ಹಣ ಸಂದಾಯ ಮಾಡಿದ ದಾಖಲೆಗಳು ಸಿಕ್ಕಿವೆ’ ಎಂದು ಭೂಷಣ ಬೊರಸೆ ತಿಳಿಸಿದರು.

‘ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ ಅಧಿಕಾರಿ ಎಂದು ಹೇಳಿಕೊಂಡು ಮತ್ತಷ್ಟು ಜನರನ್ನು ವಂಚಿಸಿದ್ದಾರೆ. ನೀವು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದೀರಿ. ಅದರ ದಂಡ ತೆರಬೇಕಾಗುತ್ತದೆ. ದಂಡ ಬೇಡವೆಂದರೆ ಇಂತಿಷ್ಟು ಡಾಲರ್‌ ಸಂದಾಯ ಮಾಡಿ ಎಂದು ಹೇಳಿ ಹಣ ಪಡೆದಿದ್ದಾರೆ. ಮತ್ತೆ ಹಲವರಿಗೆ ಆನ್‌ಲೈನ್‌ನಲ್ಲೇ ಕಾಣಿಕೆ ಚೀಟಿ (ಗಿಫ್ಟ್‌ಕಾರ್ಡ್‌) ಕಳುಹಿಸಿ ಅದರ ಮೇಲಿನ ನಂಬರ್‌ ಸ್ಕ್ರಾಚ್‌ ಮಾಡುಂತೆ ತಿಳಿಸಿದ್ದಾರೆ. ತಮ್ಮ ಮೊಬೈಲ್‌ ನಂಬರ್‌ಗೆ ಬರುವ ‘ಒಟಿಪಿ’ ಹೇಳಿದರೆ ಗಿಫ್ಟ್‌ ಸಂದಾಯವಾಗುತ್ತದೆ ಎಂದು ನಂಬಿಸಿದ್ದಾರೆ. ಹೀಗೆ ಒಟಿಪಿ ನೀಡಿದ ನಾಗರಿಕರ ಬ್ಯಾಂಕ್‌ ಖಾತೆ ಜಾಲಾಡಿ ಅವರಿಂದಲೂ ಹಣ ಕಿತ್ತುಕೊಂಡ ಸಾಧ್ಯತೆ ಇದೆ’ ಎಂದೂ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.