ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನ 16 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಜಾರಕಿಹೊಳಿ ಪೆನಲ್‌ನ ಏಳು ನಿರ್ದೇಶಕರಿದ್ದಾರೆ.
ತಾಲ್ಲೂಕುಮಟ್ಟದ 15 ಕ್ಷೇತ್ರ , ಸಹಕಾರ ಸಂಸ್ಥೆಗಳ ವ್ಯಾಪ್ತಿಗೆ ಬರುವ ಇತರೆ ಕ್ಷೇತ್ರ ಸೇರಿದಂತೆ 16 ಸ್ಥಾನಗಳಿಗೆ ಅ.19ರಂದು ಚುನಾವಣೆ ನಿಗದಿಯಾಗಿತ್ತು. ಆಯ್ಕೆ ಬಯಸಿ 43 ಅಭ್ಯರ್ಥಿಗಳಿಂದ 72 ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೇ ದಿನವಾಗಿತ್ತು.
ಈಗ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಏಳು ಸ್ಥಾನಗಳಿಗಷ್ಟೇ ಅ.19ರಂದು ಚುನಾವಣೆ ನಡೆಯಲಿದೆ. ಅಂದು ಸಂಜೆಯೇ ಫಲಿತಾಂಶ ಹೊರಬೀಳಲಿದೆ.
ಯಾರ್‍ಯಾರು ಆಯ್ಕೆ?
ಯರಗಟ್ಟಿ ಕ್ಷೇತ್ರದಿಂದ ಶಾಸಕ ವಿಶ್ವಾಸ ವೈದ್ಯ, ಕಾಗವಾಡದಿಂದ ಶಾಸಕ ಭರಮಗೌಡ(ರಾಜು) ಕಾಗೆ, ಚಿಕ್ಕೋಡಿಯಿಂದ ಶಾಸಕ ಗಣೇಶ ಹುಕ್ಕೇರಿ, ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ, ಗೋಕಾಕದಿಂದ ಅಮರನಾಥ ಜಾರಕಿಹೊಳಿ, ಸವದತ್ತಿಯಿಂದ ವಿರೂಪಾಕ್ಷಿ ಮಾಮನಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ ಮತ್ತು ಇತರೆ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
14 ಜನರು ಕಣದಲ್ಲಿ
ಡಿಸಿಸಿ ಬ್ಯಾಂಕ್‌ನ ಏಳು ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿ, 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಬೈಲಹೊಂಗಲದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಡಾ.ವಿಶ್ವನಾಥ ಪಾಟೀಲ, ರಾಮದುರ್ಗದಲ್ಲಿ ಶ್ರೀಕಾಂತ ಢವಣ ವಿರುದ್ಧ ಮಲ್ಲಪ್ಪ ಯಾದವಾಡ, ಚನ್ನಮ್ಮನ ಕಿತ್ತೂರಿನಲ್ಲಿ ವಿಕ್ರಮ ಇನಾಮದಾರ ವಿರುದ್ಧ ನಾನಾಸಾಹೇಬ ಪಾಟೀಲ, ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ, ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಉತ್ತಮ ಪಾಟೀಲ, ರಾಯಬಾಗದಲ್ಲಿ ಅಪ್ಪಾಸಾಹೇಬ ಕುಲಗೂಡೆ ವಿರುದ್ಧ ಬಸಗೌಡ ಆಸಂಗಿ ಸ್ಪರ್ಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.