ಚನ್ನಮ್ಮನ ಕಿತ್ತೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಮಾನವ ಸರಪಳಿ’ಯು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಶಿವಾ ಪೆಟ್ರೋಲ್ ಪಂಪ್ ಬಳಿ ಧಾರವಾಡ ಜಿಲ್ಲೆಗೆ ಬೆಸುಗೆ ಹಾಕಿತು.
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಹೂವಿನ ಹಳ್ಳದ ಬಳಿಯಿರುವ ಮುತ್ನಾಳ ಹದ್ದಿಯಿಂದ ಸುಮಾರು 26 ಕಿ.ಮೀ ವರೆಗೆ ನಡೆದ ಮಾನವ ಸರಪಳಿ ಜೋಡಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ವಸತಿ ಶಾಲೆ, ಖಾಸಗಿ ಶಾಲೆ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು. ದಾರಿಯುದ್ದಕ್ಕೂ ಬರುವ ಗ್ರಾಮಗಳಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿ ಗಮನ ಸೆಳೆದರು.
ಸಂವಿಧಾನ ಪೀಠ ಬೋಧನೆ ನಡೆದ ಬಳಿಕ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೆಲವು ನ್ಯೂನತೆಗಳನ್ನು ಬಿಟ್ಟರೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು’ ಎಂದರು.
ಇದೇ ವೇಳೆ ಸಸಿ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು 50ಕ್ಕೂ ಹೆಚ್ಚು ಸಸಿಗಳನ್ನು ಹೆದ್ದಾರಿ ಬದಿಗೆ ನೆಟ್ಟರು.
ತಹಶೀಲ್ದಾರ್ ರವೀಂದ್ರ ಹಾದಿಮನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಬಿಇಒ ಚನ್ನಬಸಪ್ಪ ತುಬಾಕದ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಂಜೀವ ಮಿರಜಕರ, ಆರ್‌ಎಫ್ಒ ಸಂತೋಷ ಸುಂಬಳಿ, ಉಪವಲಯ ಅರಣ್ಯಾಧಿಕಾರಿ ಎಸ್.ಕೆ. ಖೋತ, ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಮುಖಂಡರಾದ ಶಂಕರ ಹೊಳಿ, ಆಶ್ಪಾಕ ಹವಾಲ್ದಾರ, ಬಸವರಾಜ ಸಂಗೊಳ್ಳಿ, ಎಂ.ಎಫ್. ಜಕಾತಿ, ಚಂದ್ರಗೌಡ ಪಾಟೀಲ, ಕೃಷ್ಣಾ ಬಾಳೇಕುಂದ್ರಿ, ಸುನೀಲ ಘೀವಾರಿ, ಪೊಲೀಸ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ನೌಕರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.