ADVERTISEMENT

ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ: ಸಂಸದ ಜಗದೀಶ ಶೆಟ್ಟರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 3:03 IST
Last Updated 3 ಆಗಸ್ಟ್ 2025, 3:03 IST
ಬೆಳಗಾವಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿದರು   

ಬೆಳಗಾವಿ: ‘ಬೆಳಗಾವಿ-ಚನ್ನಮ್ಮನ ಕಿತ್ತೂರು–ಧಾರವಾಡ ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ 1,200 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್‌ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ವಿಮಾನಯಾನ ಇಲಾಖೆ ಹಾಗೂ ಕೆಎಐಡಿಬಿ ವತಿಯಿಂದ ಕೈಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳಗಾವಿಯಲ್ಲಿ ರಿಂಗ್‌ ರಸ್ತೆ ಹಾಗೂ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ತಲೆದೋರಿದ ತೊಡಕುಗಳನ್ನು ಬಗೆಹರಿಸಬೇಕು. ಈ ಕಾಮಗಾರಿ ಬೇಗ ಆರಂಭಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ನಿರ್ದೇಶನ ಕೊಟ್ಟರು.

ADVERTISEMENT

ಬೆಳಗಾವಿ ತಾಲ್ಲೂಕಿನ ಶಗನಮಟ್ಟಿ-ಹುನಗುಂದ-ರಾಯಚೂರು ಮಾರ್ಗದಲ್ಲಿ ಹೊಸ ಹೆದ್ದಾರಿ ನಿರ್ಮಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರು ಹೆಚ್ಚಿನ ಪರಿಹಾರ ಕೇಳಿರುವ ಬಗ್ಗೆ ಕುರಿತು ಮಾಹಿತಿ ಪಡೆದರು.

‘ಮುಂದಿನ ದಿನಗಳಲ್ಲಿ ವಿಮಾನಸೇವೆ ಬಳಸುವವರ ಸಂಖ್ಯೆ ಹೆಚ್ಚಲಿದೆ. ಅದಕ್ಕೆ ತಕ್ಕಂತೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಬೇಕಿದೆ. ಇದಕ್ಕಾಗಿ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಬೇಕಿರುವ ಭೂಮಿಯ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ವರದಿ ನೀಡಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌, ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ರಾಜಶ್ರೀ ಜೈನಾಪುರ, ಬಲರಾಮ ಚವ್ಹಾಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭುವನೇಶಕುಮಾರ್ ಇದ್ದರು.

'ರಾಜಕೀಯ ಚರ್ಚೆ ನಡೆದಿಲ್ಲ’:

‘ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಪ್ರಭಾಕರ ಕೋರೆ ಅವರ ಜನ್ಮದಿನ ಕಾರ್ಯಕ್ರಮವಿತ್ತು. ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಶಾಸಕರಾದ ಗಣೇಶ ಹುಕ್ಕೇರಿ ರಾಜು ಕಾಗೆ ಮತ್ತಿತರರು ಬಂದಿದ್ದರು. ಎಲ್ಲ ಪಕ್ಷದವರು ಸೇರಿ ಕೋರೆ ಅವರಿಗೆ ಶುಭಾಶಯ ಕೋರಿದ್ದೇವೆಯೇ ಹೊರತು ನಮ್ಮ ಮಧ್ಯೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ’ ಎಂದು ಜಗದೀಶ ಶೆಟ್ಟರ್‌ ಹೇಳಿದರು. ‘ಪ್ರಜ್ವಲ್‌ ರೇವಣ್ಣ ಅವರಿಗೆ ಶಿಕ್ಷೆ ಪ್ರಕಟವಾದ ವಿಚಾರವಾಗಿ ಅವರ ಕುಟುಂಬದವರು ಕಾನೂನಾತ್ಮಕವಾಗಿ ಹೋರಾಡಬಹುದು. ಇದು ಅವರ ಕುಟುಂಬಕ್ಕೆ ಬಿಟ್ಟ ವಿಚಾರ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.