ADVERTISEMENT

‘ಬೆಳಗಾವಿ ಜಿಲ್ಲಾ ವಿಭಜನೆ: ಸವದತ್ತಿ ಧಾರವಾಡಕ್ಕೆ ಸೇರಲಿ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 1:55 IST
Last Updated 6 ಡಿಸೆಂಬರ್ 2025, 1:55 IST
ಸವದತ್ತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಡಿಸಿಸಿ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿದರು
ಸವದತ್ತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಡಿಸಿಸಿ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿದರು   

ಸವದತ್ತಿ: ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಹೆಚ್ಚಿದ ಕುರಿತು ಸವದತ್ತಿ ತಾಲ್ಲೂಕು ನಾಗರಿಕರ ವೇದಿಕೆಯಿಂದ ಇಲ್ಲಿನ ಕಲ್ಮಠದಲ್ಲಿ ವಿವಿಧ ಸಂಘಟನೆ ಹಾಗೂ ಪ್ರಮುಖರಿಂದ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಜಿಲ್ಲೆ ವಿಭಜನೆಯಾದಲ್ಲಿ ಸವದತ್ತಿ ತಾಲ್ಲೂಕನ್ನು ಧಾರವಾಡ ಜಿಲ್ಲೆಗೆ ಸೇರಿಸಲು ಒಮ್ಮತದಿಂದ ನಿರ್ಣಯಿಸಲಾಯಿತು.

ಬಿಡಿಸಿಸಿ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿ, ಜಿಲ್ಲೆ ವಿಭಜನೆ ಕೂಗು ಕೇಳಿಬಂದಾಗ ಈ ಹಿಂದೆ ಹಲವು ಬಾರಿ ಹೋರಾಟಗಳು ನಡೆದಿವೆ. ಸವದತ್ತಿಯಿಂದ ಬೆಳಗಾವಿಗೆ ಸುಮಾರು 90 ಕಿ.ಮೀ ಅಂತರವಿದ್ದು ಜನತೆಗೆ ಸಂಚರಿಸಲು ಹೆಚ್ಚು ಸಮಯ ವ್ಯಯಿಸುವಂತಾಗಿದೆ. ಸಣ್ಣ ಕೆಲಸಕ್ಕೂ ಇಡೀ ಒಂದು ದಿನ ಕಳೆಯಬೇಕಾದ ಅನಿವಾರ್ಯವಿದೆ. 36 ಕಿ.ಮೀ  ಸಮೀಪದಲ್ಲಿರುವ ಧಾರವಾಡ ಜಿಲ್ಲೆಗೆ ಸವದತ್ತಿಯನ್ನು ಸೇರಿಸಿದಲ್ಲಿ ಸಮಯದ ಜೊತೆ ಆರ್ಥಿಕ ಹೊರೆಯೂ ತಪ್ಪಲಿದೆ. ತ್ವರಿತವಾಗಿ ಎಲ್ಲ ಸೌಲಭ್ಯಗಳು ಸರಳ ರೀತಿಯಲ್ಲಿ ಸಿಗಲಿವೆ’ ಎಂದರು.

ADVERTISEMENT

ಹೋರಾಟ ನಡೆದ ವೇಳೆ ನಿರ್ಣಯ ಕೈಗೊಳ್ಳುವುದಾಗಿ ಸರ್ಕಾರಗಳು ಹೇಳಿದ್ದವು. ಆದರೆ ಈವರೆಗೂ ಪ್ರಕ್ರಿಯೆ ನಡೆದಿಲ್ಲ. ಆದ್ದರಿಂದ ಮತ್ತೆ ಹೋರಾಟ ನಡೆಸಿ ಧಾರವಾಡಕ್ಕೆ ಸೇರಿಸಲು ಸಿದ್ಧತೆ ನಡೆಸಬೇಕಿದೆ. ಹೋರಾಟ ಸಮಿತಿಗಳನ್ನು ನಿರ್ಮಿಸಿ ರೂಪುರೇಷೆಗಳೊಂದಿಗೆ ಮತ್ತೆ ಸಭೆ ನಡೆಸಿ ಚರ್ಚೆ ನಡೆಯಲಿ. ಅಧಿವೇಶನ ಮುಕ್ತಾಯದೊಳಗೆ ಒಂದು ದಿನ ಸವದತ್ತಿ ಬಂದ್ ಗೆ ಕರೆ ನೀಡಿ ಯಶಸ್ವಿಗೊಳಿಸಿ ಸರ್ಕಾರ ಗಮನ ಸೆಳೆಯಲು ಪ್ರಯತ್ನಿಸೋಣ ಎಂದು ತಿಳಿಸಿದರು.

ಹೋರಾಟ ಸಮಿತಿಗೆ ಅಭಿನಂದನ ಕಬ್ಬಿಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಧಾರವಾಡ ಜಿಲ್ಲೆಗೆ ಸೇರಿಸುವ ಹೋರಾಟಕ್ಕೆ ಗೆಲುವು ಸಿಗುವವರೆಗೂ ವಿವಿಧ ಸಂಘಟನೆಗಳಿಂದ ತಹಶೀಲ್ದಾರ್‌ ಕಚೇರಿ ಎದುರು ನಿತ್ಯ ಸತ್ಯಾಗ್ರಹ ನಡೆಸಲು ನಿರ್ಣಯಿಸಲಾಯಿತು.

ವಕೀಲರ ಸಂಘ, ವರ್ತಕರ ಸಂಘ, ಟ್ಯಾಕ್ಸಿ ಸ್ಟ್ಯಾಂಡ್‌, ಕನ್ನಡ ಪರ ಸಂಘಟನೆಗಳು, ಸಹಕಾರಿ ಸಂಘದ ಪ್ರತಿನಿಧಿಗಳು, ಪುರಸಭೆ ಸದಸ್ಯರು, ಸ್ಥಳೀಯ ನಾಗರಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.