ADVERTISEMENT

ಬೆಳಗಾವಿ | ಶೈಕ್ಷಣಿಕ ಪ್ರಗತಿ ಪರಿಣಾಮಕಾರಿ ಆಗಲಿ: ಶಾಸಕ ಭರಮಗೌಡ ಕಾಗೆ ತಾಕೀತು

ಕೆಡಿಪಿ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:54 IST
Last Updated 17 ಸೆಪ್ಟೆಂಬರ್ 2025, 2:54 IST
ಬೆಳಗಾವಿಯಲ್ಲಿ ಮಂಗಳವಾರ ಜರುಗಿದ ಕೆಡಿಪಿ ಸಭೆಯಲ್ಲಿ ಶಾಸಕ ಭರಮಗೌಡ ಕಾಗೆ ಮಾತನಾಡಿದರು. ಸಿಇಒ ರಾಹುಲ್‌ ಶಿಂಧೆ, ಶಾಸಕ ಆಸಿಫ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಪಾಲ್ಗೊಂಡಿದ್ದರು
ಬೆಳಗಾವಿಯಲ್ಲಿ ಮಂಗಳವಾರ ಜರುಗಿದ ಕೆಡಿಪಿ ಸಭೆಯಲ್ಲಿ ಶಾಸಕ ಭರಮಗೌಡ ಕಾಗೆ ಮಾತನಾಡಿದರು. ಸಿಇಒ ರಾಹುಲ್‌ ಶಿಂಧೆ, ಶಾಸಕ ಆಸಿಫ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಪಾಲ್ಗೊಂಡಿದ್ದರು   

ಬೆಳಗಾವಿ: ‘ಈ ಬಾರಿ ಶೈಕ್ಷಣಿಕ ಸುಧಾರಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಸಬೂಬು ಹೇಳಿ ವ್ಯವಸ್ಥೆ ಹಾಳು ಮಾಡುವ ಅಧಿಕಾರಿಗಳು, ಸೋಮಾರಿಗಳನ್ನು ಗುರುತಿಸಿ ತಕ್ಕ ಶಾಸ್ತಿ ಮಾಡಬೇಕು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಭರಮಗೌಡ (ರಾಜು) ಕಾಗೆ ಅವರು ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಧಿಕಾರಿಗಳು ನಿರಂತರ ಸಭೆ, ಶಾಲಾ ಸಂದರ್ಶನ ನಡೆಸಬೇಕು. ವಿಶೇಷ ತರಗತಿಗಳ ಆಯೋಜನೆ ಮೂಲಕ ಕಲಿಕಾ ಕೊರತೆ ಗುರುತಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಲೆಗಳಿಗೆ ತ್ವರಿತ ಗತಿಯಲ್ಲಿ ಬೆಂಚು ಒದಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಶಾಲೆಗಳ ಹೊಸ ಕೊಠಡಿಗಳಲ್ಲಿ ಎಲ್ಲ ದಿನಗಳಲ್ಲಿ ಸಮರ್ಪಕ ಬೆಳಕು ಇರುವಂತೆ ನೀಲನಕ್ಷೆ ತಯಾರಿಸಬೇಕು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ ಶಿಕ್ಷಕರ ವಿರುದ್ಧ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಮಾತನಾಡಿ, ‘ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಿಡುಗಡೆ ಆಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಔಷಧಗಳ ಕೊರತೆ ಆಗದಂತೆ ನಿಗಾವಹಿಸಬೇಕು. ಯಕ್ಸಂಬ ಪ್ರಾಥಮಿಕ ಆರೋಗ್ಯ ಕೇಂದ್ರ ದುರಸ್ತಿಗೆ ಕೂಡಲೇ ಕ್ರಮ ವಹಿಸಬೇಕು. ಗ್ರಾಮೀಣ ಭಾಗದ ಚಿಕ್ಕ ಮಕ್ಕಳಲ್ಲಿ ಜ್ವರ ಹಾಗೂ ಕೆಮ್ಮು ಕಂಡುಬರುತ್ತಿದ್ದು, ಯಕ್ಸಂಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರ ಜೊತೆಗೆ ಮಕ್ಕಳ ತಜ್ಞರನ್ನು ಶೀಘ್ರವೇ ನಿಯೋಜಿಸಬೇಕು. ತಜ್ಞ ವೈದ್ಯರ ವೇತನಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಅಗತ್ಯದ ಅನುದಾನವನ್ನು ನೀಡುತ್ತೇನೆ’ ಎಂದು ತಿಳಿಸಿದರು.

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು, ಶೀಘ್ರ ಕಾಮಗಾರಿ  ಪ್ರಾರಂಭಿಸಬೇಕು. ಸದಲಗಾದ ಕೇಂದ್ರೀಯ ವಿದ್ಯಾಲಯದಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಕ್ರಮ ವಹಿಸಬೇಕು’ ಎಂದರು.

‘ಎಲ್ಲ ತಾಲೂಕುಗಳಲ್ಲಿ ಅಕ್ಕ ಕೆಫೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ. ದಸರಾ ಕ್ರೀಡಾಕೂಟಗಳನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ತಿಳಿಸಿದರು.

ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ, ಶಾಸಕ ಆಸೀಫ್ ಸೇಠ್‌, ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ, ನಾಮನಿರ್ದೇಶಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.

ಸಭೆಯ ಬಳಿಕ, ಅನುಕಂಪದ ಆಧಾರದಲ್ಲಿ ಗ್ರಾಮ ಪಂಚಾಯತಿಗಳಿಗೆ ನೇಮಕಗೊಂಡ ಫಲಾನುಭವಿಗಳು ನೇಮಕಾತಿ ಆದೇಶ ಪತ್ರ ಹಾಗೂ ತಾಲ್ಲೂಕು ಸಂಜೀವಿನಿ ಯೋಜನೆಯಡಿ ಎನ್.ಆರ್.ಎಲ್.ಎಂ ಸಿಬ್ಬಂದಿಗೆ ಲ್ಯಾಪ್‌ಟಾಪ್‍ಗಳನ್ನು ವಿತರಿಸಲಾಯಿತು. 

ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಹುದ್ದೆಗಳ ಭರ್ತಿಗೆ ತ್ವರಿತವಾಗಿ ಕ್ರಮ ವಹಿಸಬೇಕು
ಮಹಾಂತೇಶ ಕೌಜಲಗಿ ಅಧ್ಯಕ್ಷ ರಾಜ್ಯ ಹಣಕಾಸು ಸಂಸ್ಥೆ
ಸರ್ಕಾರಿ ಶಾಲೆ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಂದಾಜು 1000 ಇನ್ವರ್ಟರ್‌ ಬ್ಯಾಟರಿಗಳನ್ನು ಪೂರೈಸಲಾಗುತ್ತಿದೆ
ರಾಹುಲ್‌ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ

ಸ್ಪಷ್ಟ ಮಾಹಿತಿ ನೀಡಲು ತಾಕೀತು

‘ಸರ್ಕಾರದಿಂದ ವಿವಿಧ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಸಬೂಬು ನೀಡದೆ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ ಪ್ರಗತಿ ಸಾಧಿಸಬೇಕು’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಸೂಚಿಸಿದರು. ಸಭೆಯಲ್ಲಿ ಅಧಿಕಾರಿಗಳು ಅಸ್ಪಷ್ಟ ಮಾಹಿತಿ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ‘ತ್ರೈಮಾಸಿಕ ಕೆ.ಡಿ.ಪಿಯಂತಹ ಮಹತ್ವದ ಸಭೆಗೆ ಮಾಹಿತಿ ನೀಡುವ ಅಧಿಕಾರಿಗಳು ಸಮರ್ಪಕ ಹಾಗೂ ಸ್ಪಷ್ಟ ಮಾಹಿತಿ ಒದಗಿಸಬೇಕು’ ಎಂದು ತಾಕೀತು ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.