ಬೆಳಗಾವಿ: ಇಲ್ಲಿನ ಶಹಾಪುರದ ಜೋಶಿ ಮಾಳ ಪ್ರದೇಶದಲ್ಲಿ ಬುಧವಾರ ಒಂದೇ ಕುಟುಂಬದ ಮೂವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ತನ್ನಿಂದ ಅರ್ಧ ಕೆ.ಜಿ ಚಿನ್ನ ಪಡೆದು ಮರಳಿ ಕೊಡದೇ ಚಿನ್ನದ ವ್ಯಾಪಾರಿ ಮೋಸ ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.
ಮಂಗಳಾ ಕುರಡೇಕರ್ (70) ಇವರ ಪುತ್ರ ಸಂತೋಷ (44), ಪುತ್ರಿ ಸುವರ್ಣ (42) ಮೃತಪಟ್ಟವರು. ಇನ್ನೊಬ್ಬ ಪುತ್ರಿ ಸುನಂದಾ (40) ಅವರೂ ವಿಷ ಸೇವಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಂತೋಷ ಅವರು ‘ಚಿನ್ನದ ಚೀಟಿ’ ವ್ಯವಹಾರ ಮಾಡುತ್ತಿದ್ದರು. ಅದರಲ್ಲಿ ಉಂಟಾದ ಮೋಸವೇ ಸಾವಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಸ್ಥಳ ಮಹಜರು ಮಾಡಿದ ಶಹಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 9ರ ಸುಮಾರಿಗೆ ವಿಷ ಸೇವಿಸಿದ್ದಾರೆ. ಅದಕ್ಕೂ ಮುನ್ನ ಸಂತೋಷ ಅವರು ವಿಷ ಕುಡಿದು ಸಾಯೋಣ ಎಂದು ಹೆಣ್ಣುಮಕ್ಕಳಿಗೆ ಎರಡು ತಾಸು ಮನವರಿಕೆ ಮಾಡಿದರು. ಮೊದಲು ತಾಯಿ, ತಂಗಿಗೆ ವಿಷ ಕೊಟ್ಟು ತಾವೂ ಕುಡಿದರು. ಸುನಂದಾ ಕುಡಿಯಲು ಹಿಂಜರಿದರು. ಮೂವರೂ ಒದ್ದಾಡಿ ಸತ್ತ ಮೇಲೆ ತಾನು ಬದುಕಿದ್ದು ಏನು ಮಾಡುವುದು ಎಂಬ ಭಯದಿಂದ ಅವರೂ ವಿಷ ಕುಡಿದ್ದಾಗಿ ಸುನಂದಾ ಹೇಳಿಕೆ ನೀಡಿದ್ದಾರೆ.
ಶವಗಳ ಮುಂದೆ ಸುನಂದಾ ಗೋಳಾಡುವುದನ್ನು ಕೇಳಿ ಅಕ್ಕಪಕ್ಕದವರು ಬಂದರು. ಅದರ ವಿಡಿಯೊ ಮಾಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಅಷ್ಟರಲ್ಲಿ ನಿತ್ರಾಣಗೊಂಡ ಸುನಂದಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಡೆತ್‌ನೋಟ್ ಪತ್ತೆ: ಸಂತೋಷ ಅವರ ಜೇಬಿನಲ್ಲಿ ಮರಾಠಿಯಲ್ಲಿ ಬರೆದ ಡೆತ್‌ನೋಟ್ ಪತ್ತೆಯಾಗಿದೆ.
‘ನಾನು ಬಹಳಷ್ಟು ಜನರ ಬಳಿ ಗೋಲ್ಡ್ ಚೀಟಿ (ಚಿಟ್ ಫಂಡ್ ಮಾದರಿ) ಮಾಡುತ್ತಿದ್ದೆ. ಹಲವರು ಹಣ ಹೂಡಿದ್ದರು. ವಡಗಾವಿಯ ಚಿನ್ನದ ವ್ಯಾಪಾರಿ ರಾಜು ಕುಡತರಕರ್ ಅವರಿಗೆ ಅರ್ಧ ಕೆ.ಜಿ (500 ಗ್ರಾಂ) ಚಿನ್ನ ಕೊಟ್ಟಿದ್ದೇನೆ. ಬೇರೆ ಬೇರೆ ರೀತಿಯ ಚಿನ್ನಾಭರಣ ಮಾಡಿ ಕೊಡುತ್ತೇನೆ ಅಂದಿದ್ದರು. ಮರಳಿ ಕೇಳಿದರೆ ರಾಜು ಹಾಗೂ ಅವರ ಪತ್ನಿ ನನ್ನ ಚಿನ್ನವನ್ನು ಕೊಡುತ್ತಿಲ್ಲ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ, ಚಿನ್ನವನ್ನು ನಾನೇ ಎತ್ತಿಕೊಂಡು ಊರು ಬಿಟ್ಟು ಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇನ್ನೊಂದೆಡೆ ಹಣ ಹೂಡಿದ ಜನರೂ ಪದೇಪದೇ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನ ನೊಂದು ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಪೊಲೀಸರು ರಾಜು ಕುಡತರಕರ ಅವರಿಂದ ಚಿನ್ನವನ್ನು ಪಡೆದುಕೊಂಡು, ನಾನು ಕೊಡಬೇಕಾದ ಜನರಿಗೆ ನೀಡಬೇಕು. ರಾಜುಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.