ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್ ಮಾಡಬೇಕು ಎಂದು ಆಗ್ರಹಿಸಿ, ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ರಸ್ತೆ ಬಂದ್ ಮಾಡಿದ ರೈತರಿಗೆ, ಧರಣಿ ಕೈಬಿಡುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ಜೈ ಕಿಸಾನ್ ಖಾಸಗಿ ಸಗಟು ತರಕಾರಿ ವ್ಯಾಪಾರಿಗಳ ಸಂಘದ ಪರವಾನಗಿಯನ್ನು ನ್ಯಾಯಾಲಯ ರದ್ದು ಮಾಡಿದೆ. ಆದರೂ ಅಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಜಿಲ್ಲಾಡಳಿತ ತಕ್ಷಣ ಇದನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಇಡೀ ದಿನ ರೈತರು ಹೋರಾಟ ಮಾಡಿದರು.
ಬೆಳಿಗ್ಗೆಯೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ರೈತರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ 9ರವರೆಗೂ ಸ್ಥಳದಲ್ಲೇ ಉಳಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೆ ರಸ್ತೆ ಮೇಲೆ ಮಲಗಿ, ಸಂಚಾರ ಬಂದ್ ಮಾಡಿದರು.
ನಂತರ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.
ರೈತರು ಕಾನೂನು ಬದ್ಧವಾಗಿ ಎಪಿಎಂಸಿಯಲ್ಲೇ ವ್ಯಾಪಾರ ಮಾಡಬೇಕು ಎಂಬ ಬೇಡಿಕೆಯನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಖಾಸಗಿ ಮಾರುಕಟ್ಟೆಯಲ್ಲಿ 72(ಆ) ಮತ್ತು 78ನೇ ಕಲಂಗಳ ಉಲ್ಲಂಘನೆ ಮಾಡಿದ ನಿರ್ವಹಣಾ ಮಂಡಳಿ ಹಾಗೂ ವ್ಯಾಪಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ರೈತರ ಹಿತಾಸಕ್ತಿ ಕಾಪಾಡಬೇಕು ಎಂದೂ ಆಗ್ರಹಿಸಿದರು.
ನ್ಯಾಯಾಲಯದ ಆದೇಶವನ್ನು ಪಾಲಿಸಿ ಎಂದು ಹೇಳಲು ಹೋದ ಅಧಿಕಾರಿಗಳು ಹಾಗೂ ರೈತರ ಮೇಲೆ ಅಲ್ಲಿನ ಕೆಲವರು ದಬ್ಬಾಳಿಕೆ ನಡೆಸಿದ್ದಾರೆ. ಅಂಥವರ ಮೇಲೆ ಗೂಂಡಾ ಪ್ರಕರಣ ದಾಖಲಿಸಬೇಕು. ಇದೇ ಪ್ರವೃತ್ತಿ ಮುಂದುವರಿದರೆ ರೈತರ ಮಾರುಕಟ್ಟೆಗೇ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಸಿದಗೌಡ ಮೋದಗಿ, ಚೂನಪ್ಪ ಪೂಜೇರಿ, ಸಂಜೀವ ಹಾವಣ್ಣವರ, ಶಶಿಕಾಂತ ಗುರೂಜಿ, ವಕೀಲ ನಿತಿನ್ ಬೋಳಬಂದಿ, ಹೋರಾಟಗಾರರಾದ ಸುಜೀತ ಮುಳಗುಂದ, ರಾಜೀವ ಟೋಪಣ್ಣವರ ನೇತೃತ್ವ ವಹಿಸಿದ್ದರು.
ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ನಡೆದ ಪ್ರತಿಭಟನೆ ವೇಳೆ ಮರದಿಂದ ಬಿದ್ದ ರೈತ ಶಂಕರ ಅವರನ್ನು ಜತೆಯಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರು
ಮರದಿಂದ ಬಿದ್ದ ರೈತ
ಪ್ರತಿಭಟನೆ ವೇಳೆ ಮರ ಏರಿದ್ದ ರಾಯಬಾಗ ತಾಲ್ಲೂಕಿನ ಕಟಕಬಾವಿಯ ರೈತ ಶಂಕರ ಮಾಳಿ ಎನ್ನುವವರು ಆಯ ತಪ್ಪಿ ಮರದಿಂದ ಬಿದ್ದರು. ತೀವ್ರ ಗಾಯಗೊಂಡ ಅವರನ್ನು ಜತೆಯಲ್ಲಿದ್ದ ರೈತರು ಎತ್ತಿಕೊಂಡು ಹೋಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಅವರಿಗೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಂದಿನಿಂದಲೇ ವ್ಯಾಪಾರ ಬಂದ್: ಡಿ.ಸಿ
‘ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ವರ್ತಕರ ಸಭೆ ಶಾಂತಿಯುತವಾಗಿ ಯಶಸ್ವಿಯಾಗಿದೆ. ಬುಧವಾರದಿಂದ ಅಲ್ಲಿ ಯಾವುದೇ ವ್ಯಾಪಾರ ನಡೆಯುವುದಿಲ್ಲ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ‘ಖಾಸಗಿ ತರಕಾರಿ ಮಾರುಕಟ್ಟೆ ಪರವಾನಗಿ ರದ್ದುಗೊಳಿಸಿದ ನಂತರ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಕಾನೂನು ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗಿದೆ. ಆಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.