ADVERTISEMENT

ಬೆಳಗಾವಿ | ಖಾಸಗಿ ತರಕಾರಿ ಮಾರುಕಟ್ಟೆ ಬಂದ್‌ ಮಾಡಬೇಡಿ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 11:49 IST
Last Updated 29 ಆಗಸ್ಟ್ 2025, 11:49 IST
<div class="paragraphs"><p>ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿಯ ರೈತರು ಪ್ರತಿಭಟನೆ ನಡೆಸಿದರು</p></div>

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿಯ ರೈತರು ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಇಲ್ಲಿನ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್‌ ಮಾಡಬಾರದು ಎಂದು ಒತ್ತಾಯಿಸಿ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿಯ ರೈತರು ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ADVERTISEMENT

‘ಈ ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇದ್ದು, ತರಕಾರಿ ಸಾಗಣೆಗೆ ಅನುಕೂಲಕರ ವಾತಾವರಣವಿದೆ. ಇದರಿಂದ ಸಾಗಣೆ ವೆಚ್ಚವೂ ಕಡಿಮೆಯಾಗುತ್ತಿದೆ. ಆದರೆ, ರಾಜಕೀಯ ಒತ್ತಡಕ್ಕೆ ಮಣಿದು ಕೆಲವು ಅಧಿಕಾರಿಗಳನ್ನು ಇದನ್ನು ಮುಚ್ಚಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಆಸ್ಪದ ನೀಡಬಾರದು’ ಎಂದು ಒತ್ತಾಯಿಸಿದರು.

‘ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಮುಚ್ಚಿದರೆ, ರೈತರು ಅನಿವಾರ್ಯವಾಗಿ ಎಪಿಎಂಸಿಗೆ ಹೋಗಬೇಕಾಗುತ್ತದೆ. ತರಕಾರಿ ಸಾಗಣೆ ವೆಚ್ಚವೂ ಹೆಚ್ಚುತ್ತದೆ. ಈಗಾಗಲೇ ಎಪಿಎಂಸಿಯಲ್ಲಿ ವ್ಯಾಪಾರಿಗಳಿಂದ ಹೆಚ್ಚಿನ ಕಮಿಷನ್‌ ಪಡೆದು ಮೋಸ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟವಾಗಲಿದೆ’ ಎಂದು ದೂರಿದರು.

‘ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ದರ ಸಿಗಲೆಂದು ಸರ್ಕಾರ ಖಾಸಗಿ ತರಕಾರಿ ಮಾರುಕಟ್ಟೆ ಆರಂಭಿಸಲು ಅನುಮತಿ ನೀಡಿದೆ. ಹಾಗಾಗಿ ಇದನ್ನು ಯಾವ ಕಾರಣಕ್ಕೂ ಮುಚ್ಚಬಾರದು ಎಂದು ಒತ್ತಾಯಿಸಿದರು.

ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಜೈ ಕಿಸಾನ್‌ ಖಾಸಗಿ ಸಗಟು ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಮೇಯರ್‌ ಮಂಗೇಶ ಪವಾರ ಅವರನ್ನು ಭೇಟಿಯಾಗಿ ಚರ್ಚಿಸಿದರು

ಮೇಯರ್‌ ಮೊರೆ ಹೋದ ವ್ಯಾಪಾರಿಗಳು

‘ಜೈ ಕಿಸಾನ್‌ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್‌ ಮಾಡಬಾರದು’ ಎಂದು ಒತ್ತಾಯಿಸಿ ಅಲ್ಲಿನ ವ್ಯಾಪಾರಿಗಳು ಮೇಯರ್‌ ಮಂಗೇಶ ಪವಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ವ್ಯಾಪಾರಿಯೂ ಆಗಿರುವ ಪಾಲಿಕೆ ಸದಸ್ಯ ಮುಜಮ್ಮಿಲ್‌ ಡೋಣಿ, ‘ಕೆಲವರು ದುರುದ್ದೇಶದಿಂದ ಇದು ಅನಧಿಕೃತ ಮಾರುಕಟ್ಟೆ ಎಂದು ಆರೋಪಿಸುತ್ತಿದ್ದಾರೆ. ಗಣೇಶೋತ್ಸವ ಮತ್ತು ಈದ್‌–ಮಿಲಾದ್‌ ವೇಳೆ ವಿವಾದ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಈ ಮಾರುಕಟ್ಟೆ ಮುಚ್ಚಲು ಹುನ್ನಾರ ನಡೆದಿದೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

‘ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದವರು ಎಪಿಎಂಸಿಯಲ್ಲಿನ  ಮಳಿಗೆಗಳನ್ನು ಕಡಿಮೆ ದರಕ್ಕೆ ಬಾಡಿಗೆಗೆ ಪಡೆದು, ವ್ಯಾಪಾರಿಗಳಿಗೆ ಹೆಚ್ಚಿನ ದರಕ್ಕೆ ನೀಡಿದ್ದಾರೆ. ರೈತರ ಮೇಲೆ ಮೋಸ ನಿರಂತರವಾಗಿ ನಡೆಯುತ್ತಿದೆ’ ಎಂದು ದೂರಿದರು.

‘ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಮೇಯರ್‌ ಪವಾರ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.