ಬೆಳಗಾವಿ: ನಗರದ ಮುಖ್ಯ ರಸ್ತೆಯ ಸಂಚಾರ ದಟ್ಟಣೆ ನಿಯಂತ್ರಿಸಲು ದಶಕದ ಹಿಂದೆ ಕಂಡಿದ್ದ ಕನಸಿಗೆ ಈಗ ಮೂರ್ತರೂಪ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ನೀಲನಕ್ಷೆ ಸಿದ್ಧಗೊಂಡಿದ್ದು, ಅಂದುಕೊಂಡಂತಾದರೆ ಸೆಪ್ಟೆಂಬರ್‌ನಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಆರಂಭದಲ್ಲಿ ₹90 ಕೋಟಿಯ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ದಶಕಗಳಿಂದ ಸರ್ಕಾರ ಬದಲಾದ ಕಾರಣ ಇದು ಕಾರ್ಯಗತಗೊಳ್ಳಲಿಲ್ಲ. ಮತ್ತೆ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಅವರ ಬಹುವರ್ಷಗಳ ಕನಸಿಗೆ ರೆಕ್ಕೆ ನೀಡಿದ್ದಾರೆ. ಇಂದೇ ಕಾಮಗಾರಿ ಆರಂಭಿಸಿದರೂ ಮುಗಿಯಲು ದಶಕ ಬೇಕಾಗುತ್ತದೆ. ಹೀಗಾಗಿ, ₹450 ಕೋಟಿ ಅನುದಾನ ಇದಕ್ಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮೊದಲ ಹಂತದ ಕಾಮಗಾರಿಗೆ ₹200 ಕೋಟಿ ವೆಚ್ಚವನ್ನು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ.
ಬೆಂಗಳೂರು, ಹುಬ್ಬಳ್ಳಿ ನಗರಗಳಲ್ಲಿ ನಡೆದ ಮೇಲ್ಸೇತುವೆ ಕಾಮಗಾರಿಗಳು ದಶಕಗಳಿಂದಲೂ ಕುಂಟುತ್ತ ಸಾಗಿವೆ. ಬೆಳಗಾವಿಗೂ ಇಂಥದ್ದೇ ಸ್ಥಿತಿ ಬಂದರೆ ಸಂಚಾರ ಸುಗಮವಾಗುವ ಬದಲು ಮತ್ತಷ್ಟು ಜಟಿಲವಾಗಲಿದೆ. ಆಡಳಿತ ವರ್ಗ ಎಷ್ಟು ಇಚ್ಛಾಶಕ್ತಿ ತೋರುತ್ತದೆ ಎಂಬುದರ ಮೇಲೆ ಇದರ ಯಶಸ್ಸು ನಿಂತಿದೆ ಎಂಬುದು ನಗರವಾಸಿಗಳ ಅನಿಸಿಕೆ. ಆಡಳಿತ ವರ್ಗದ ಇಚ್ಚಾಶಕ್ತಿ ಕೊರತೆಯ ಕಾರಣ ಇಂಥ ಹಲವು ಯೋಜನೆಗಳು ನನೆಗುದಿಗೆ ಬಿದ್ದ ಉದಾಹರಣೆಗಳೂ ಸಾಕಷ್ಟಿವೆ.
ಹೇಗಿದ್ದ ನಗರ ಹೇಗಾಗಲಿದೆ?:
ಸಂಕಮ್ ಹೋಟೆಲ್ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡು ಆರಂಭವಾಗುವ ಮೇಲ್ಸೇತುವೆ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ (ಹಳೆ ಆರ್‌ಟಿಒ), ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆಯ ಮೂಲಕ ಸಾಗಿ ಬೋಗಾರ್ ವೇಸ್‌ವರೆಗೆ ನಿರ್ಮಾಣಗೊಳ್ಳಲಿದೆ. ಮೊದಲ ಹಂತದ ಕಾಮಗಾರಿ ಹೆದ್ದಾರಿಯಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ ಮಾತ್ರ ಇರಲಿದೆ.
ನಗರದ ನಾಲ್ಕು ಪ್ರಮುಖ ವೃತ್ತಗಳಲ್ಲಿ ಮೂರು ಜಂಕ್ಷನ್‌ಗಳು ಇರಲಿವೆ. ಇಲ್ಲಿ ಎರಡು ದಿಕ್ಕಿನಿಂದ ಮೇಲ್ಸೇತುವೆ ಕನೆಕ್ಟ್ ಮಾಡುವ ರಸ್ತೆ ನಿರ್ಮಾಣವಾಗಲಿದೆ. ಅಶೋಕ ವೃತ್ತದ ಬಳಿ ಮೊದಲ ಜಂಕ್ಷನ್ ಇರಲಿದ್ದು, ಬಸ್ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಸಿಗಲಿದೆ. ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ರಾಣಿ ಚನ್ನಮ್ಮ ವೃತ್ತಗಳಲ್ಲಿ ಕೂಡ ಶ್ರೀಕೃಷ್ಣದೇವರಾಯ ಮಾರ್ಗ ಸಂಪರ್ಕಿಸುವ ರಸ್ತೆ ಜೋಡಣೆಯಾಗಲಿದೆ.
ರಾಣಿ ಚನ್ನಮ್ಮ ವೃತ್ತವನ್ನು ಕನೆಕ್ಟ್ ಮಾಡುವ ಸೇತುವೆ ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ಕೆಎಲ್‌ಇ ಆಸ್ಪತ್ರೆ ಮುಂಭಾಗದಲ್ಲೂ ನಿರ್ಮಾಣಗೊಳ್ಳಲಿದೆ. ಐಸಿಎಂಆರ್ ಬಳಿ ಮತ್ತದೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ನಗರದ ಒಳಗೆ ಬಂದು ಸಂಚಾರ ದಟ್ಟಣೆಗೆ ಕಾರಣವಾಗುವ ಎಲ್ಲ ವಾಹನಗಳು ಸೇತುವೆ ಮೇಲೆಯೇ ಸಂಚರಿಸಲು ಅವಕಾಶ ಸಿಗಲಿದೆ.
ರೈಲು ನಿಲ್ದಾಣದ ಮಾರ್ಗವಾಗಿ ಸಂಚರಿಸಬೇಕಾದ ವಾಹನಗಳು ರಾಣಿ ಚನ್ನಮ್ಮ ವೃತ್ತದಿಂದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಕೆಳಗಿಳಿದು ಬೋಗಾರ್‌ವೇಸ್‌ನಲ್ಲಿ ಸಾಗಲಿವೆ.
ಅಲ್ಲದೇ, ನಗರದಿಂದ ವಿಮಾನ ನಿಲ್ದಾಣಕ್ಕೂ ನೇರವಾಗಿ ಸಂಪರ್ಕ ಕಲ್ಪಿಸುವಂತೆ ಈ ಮೇಲ್ಸೇತುವೆ ನಿರ್ಮಿಸಲಿದ್ದು, ಇದಕ್ಕೆ ಅಗತ್ಯವಾಗಿ ಸರ್ವಿಸ್ ರಸ್ತೆಯನ್ನೂ ನೀಲನಕ್ಷೆಯಲ್ಲಿ ಸೇರಿಸಲಾಗಿದೆ.
ಬದಲಾಗುವುದೇ ನಗರದ ಸ್ವರೂಪ?
ಎಲ್ಲೆಲ್ಲಿ ಮೇಲ್ಸೇತುವೆಗಳು ನಿರ್ಮಾಣ ಆಗಿವೆಯೋ ಅಲ್ಲೆಲ್ಲ ವಾಣಿಜ್ಯ ಚಟುವಟಿಕೆಗಳು ಕುಸಿದಿರುವ ಉದಾಹರಣೆಗಳೇ ಹೆಚ್ಚು. ಮೇಲಾಗಿ ಕಾಮಗಾರಿಗಾಗಿ ಅಪಾರ ಸಂಖ್ಯೆಯ ಮರಗಳ ಹನನವೂ ಅನಿವಾರ್ಯವಾಗಲಿದೆ. ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬ ನಿಯಮ ಇಲ್ಲೂ ಅನ್ವಯವಾಗುವ ಸಾಧ್ಯತೆ ಹೆಚ್ಚು. ಸದ್ಯ ಮೇಲ್ಸೇತುವೆ ತ್ರಿಡಿ ನಕಾಶೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇದರಲ್ಲಿ ರಾಣಿ ಚನ್ನಮ್ಮನ ಪ್ರತಿಮೆಯ ಸುತ್ತ ವೃತ್ತಾಕಾರದ ರಸ್ತೆ ನಿರ್ಮಿಸಿ ಪ್ರತಿಮೆಯ ಅಂದ ಹೆಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಮಾರ್ಗದಲ್ಲೂ ಎರಡು ಲೇನ್‌ಗಳಿರುವ ಕಾರಣ ಎರಡೂ ದಿಕ್ಕಿನ ಸಂಚಾರ ಸುಗಮವಾಗಲಿದೆ. ಸೇತುವೆ ಪೂರ್ಣಗೊಂಡ ಬಳಿಕ ಸದ್ಯ ಇರುವ ನಗರದ ಅರ್ಧ ಚಿತ್ರಣವೇ ಬದಲಾಗಲಿದೆ ಎಂಬುದು ಅನುಭವಿಗಳ ಆತಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.