ADVERTISEMENT

ಖಾನಾಪುರ | ಒಂದು ಗ್ರಾಮ– ಒಂದು ಮೂರ್ತಿ ಪದ್ಧತಿ: ಊರನ್ನು ಒಂದಾಗಿಸಿದ ಒಬ್ಬನೇ ಗಣಪ

ಪ್ರಸನ್ನ ಕುಲಕರ್ಣಿ
Published 26 ಸೆಪ್ಟೆಂಬರ್ 2023, 5:55 IST
Last Updated 26 ಸೆಪ್ಟೆಂಬರ್ 2023, 5:55 IST
ಖಾನಾಪುರ ತಾಲ್ಲೂಕಿನ ಗೋಲ್ಯಾಳಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಗಣಪತಿ
ಖಾನಾಪುರ ತಾಲ್ಲೂಕಿನ ಗೋಲ್ಯಾಳಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಗಣಪತಿ    

ಖಾನಾಪುರ: ಖಾನಾಪುರ ಪಟ್ಟಣದ ವಿವಿಧ ಕಡೆಗಳಲ್ಲಿ ಹತ್ತಾರು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ತಾಲ್ಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಯ ಗೋಲ್ಯಾಳಿ ಗ್ರಾಮದಲ್ಲಿ ಒಂದು ಗ್ರಾಮ ಒಂದು ಗಣಪ ನಿಯಮವನ್ನು ಪಾಲಿಸಿಕೊಂಡು ಬರಲಾಗಿದೆ. ಕನ್ನಡ– ಮರಾಠಿ, ಹಿಂದೂ– ಮುಸ್ಲಿಂ ಹೀಗೆ ಎಲ್ಲ ಧರ್ಮ, ಭಾಷೆಯ ಜನರೂ ಒಂದಾಗಿರುವುದು ಈ ಊರಿನ ವಿಶೇಷ.

3 ಸಾವಿರ ಜನಸಂಖ್ಯೆಯಿರುವ ಗೋಲ್ಯಾಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಒಂದೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗಿದೆ.

ಗ್ರಾಮದ ಹಿರಿಯರು ಮುಂಚಿನಿಂದಲೂ ಹಾಕಿಕೊಟ್ಟ ಪದ್ಧತಿಯನ್ನು ಗ್ರಾಮದ ಇಂದಿನ ಪೀಳಿಗೆಯವರು ಮುನ್ನಡೆಸಿಕೊಂಡು ಬಂದಿದ್ದಾರೆ. ಪರಿಣಾಮ ಇಡೀ ಗ್ರಾಮ ಒಂದೇ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಏಕತೆ ಮೆರೆದಿದೆ.

ADVERTISEMENT

ಗ್ರಾಮದ ಪ್ರಮುಖ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮಂಟಪದಲ್ಲಿ ಗ್ರಾಮದ ಗಣೇಶೋತ್ಸವ ಸಮಿತಿಯ ವತಿಯಿಂದ 10 ದಿನಗಳ ಕಾಲ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗಣೇಶನ ಮಂಟಪದಲ್ಲಿ ಸತ್ಯನಾರಾಯಣ ಪೂಜೆ ಕೈಗೊಂಡು ಇಡೀ ಗ್ರಾಮಕ್ಕೆ ಮತ್ತು ಅಕ್ಕಪಕ್ಕದ ಗ್ರಾಮಗಳ ಜನತೆಗೆ ಅನ್ನ ಸಂತರ್ಪಣೆ ಮಾಡಲಾಗಿದೆ.

ಗೋಲ್ಯಾಳಿ ಗ್ರಾಮದಲ್ಲಿ ಕನ್ನಡ, ಮರಾಠಿ, ಕೊಂಕಣಿ ಭಾಷಿಕರಿದ್ದಾರೆ. ವಿವಿಧ ಜಾತಿಯ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಗ್ರಾಮದಿಂದ ಉದ್ಯೋಗ ಅರಸಿ ಪರವೂರಿಗೆ ತೆರಳಿದವರು ಗಣೇಶನ ಹಬ್ಬಕ್ಕೆ ಮರಳಿ ಊರಿಗೆ ಬಂದು ತಮ್ಮ ಬಂಧು- ಬಾಂಧವರೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಗ್ರಾಮದಲ್ಲಿ ಚೌತಿಯಿಂದ ಅನಂತ ಚತುರ್ದಶಿವರೆಗೆ ನಡೆಯುವ ಗಣೇಶೋತ್ಸವವನ್ನು ಗ್ರಾಮದ ಎಲ್ಲ ಜಾತಿ-ಭಾಷೆಯ ಬಾಂಧವರು ಕೂಡಿಕೊಂಡು ಸೌಹಾರ್ದದಿಂದ ಆಚರಿಸುತ್ತಿರುವುದು ವಿಶೇಷ.

‘‌ಒಂದು ಗ್ರಾಮ ಒಂದು ಗಣಪ ಪದ್ಧತಿಗೆ ಗ್ರಾಮ ಪಂಚಾಯಿತಿಯಿಂದಲೂ ಅಗತ್ಯ ಸಹಕಾರ ನೀಡಲಾಗಿದೆ’ ಎನ್ನುತ್ತಾರೆ ಗೋಲ್ಯಾಳಿ ಪಿಡಿಒ ಪರಶುರಾಮ ಹೊಳೆಣ್ಣವರ.

‘ಗೋಲ್ಯಾಳಿಯಲ್ಲಿ ಈ ಪರಿಕಲ್ಪನೆಯನ್ನು ಹಿಂದಿನಿಂದಲೂ ಪರಿಪಾಲಿಸಲಾಗಿದೆ. ಗ್ರಾಮದ ಯುವಜನರು ಇಂದಿಗೂ ಈ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ವಿಶೇಷ’ ಎನ್ನುತ್ತಾರೆ ಮಾಜಿ ಶಾಸಕ ಅರವಿಂದ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.