ADVERTISEMENT

ಬೆಳಗಾವಿ | ‘ಆಪರೇಷನ್ ಸಿಂಧೂರ’ ಪ್ರತಿಫಲಿಸಿದ ಗಣಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:55 IST
Last Updated 3 ಸೆಪ್ಟೆಂಬರ್ 2025, 2:55 IST
ಬೆಳಗಾವಿಯ ನಾಥಪೈ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಗಣಪನ ಮಂಟಪದಲ್ಲಿ ದೇಶದ ವಿವಿಧ ಪುಣ್ಯಕ್ಷೇತ್ರಗಳ ಮಾದರಿ ನಿರ್ಮಿಸಲಾಗಿದೆ  ಪ್ರಜಾವಾಣಿ ಚಿತ್ರ
ಬೆಳಗಾವಿಯ ನಾಥಪೈ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಗಣಪನ ಮಂಟಪದಲ್ಲಿ ದೇಶದ ವಿವಿಧ ಪುಣ್ಯಕ್ಷೇತ್ರಗಳ ಮಾದರಿ ನಿರ್ಮಿಸಲಾಗಿದೆ  ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದ ವೃತ್ತಗಳಲ್ಲಿ, ಚೌಕಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿಘ್ನ ನಿವಾರಕನ ಮೂರ್ತಿಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಇಲ್ಲಿನ ಶಹಾಪುರದ ಖಡೇಬಜಾರ್‌ನಲ್ಲಿರುವ ಎಸ್‌ಬಿಐ ವೃತ್ತದಲ್ಲಿ ಪ್ರತಿಷ್ಠಾಪಿಸಿದ ‘ಆಪರೇಷನ್‌ ಸಿಂಧೂರ’ ಸಾಹಸವನ್ನು ಪ್ರತಿಫಲಿಸುವ ಮಂಟಪ ಚಿತ್ತಾಪಹಾರಿಯಾಗಿದೆ.

ಮಂಟಪದ ಮುಂಭಾಗ ಶಾಮಿಯಾನ ಹಾಕಿದ್ದು, ಇದರ ಮಹಾದ್ವಾರಗಳ ಮೇಲೆ ಆಪರೇಷನ್ ಸಿಂಧೂರದ ನೆನಪುಗಳನ್ನು ಬಿಂಬಿಸಲಾಗಿದೆ. ಒಂದೆಡೆ ಲೆಫ್ಟಿನಂಟ್ ಕರ್ನಲ್‌ ಸೋಫಿಯಾ ಖುರೇಷಿ ಹಾಗೂ ಇನ್ನೊಂದೆಡೆ ವಿಂಗ್‌ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಭಾವಚಿತ್ರ ಅಳವಡಿಸಲಾಗಿದೆ. ಒಳಗಡೆ ಗಣಪನ ಮೂರ್ತಿ ಪಕ್ಕದಲ್ಲೇ ಈ ಇಬ್ಬರೂ ವೀರ ವನಿತೆಯರ ಮೂರ್ತಿಗಳನ್ನೂ ಮಾಡಿದ್ದು ಇನ್ನೂ ಗಮನ ಸೆಳೆಯುತ್ತದೆ.

ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೆಮ್ಮೆಯ ಸೊಸೆಯಾದ ಸೋಫಿಯಾ ಖುರೇಷಿ ಹಾಗೂ ವ್ಯೋಮಿಕಾ ಅವರು ಆಪರೇಷನ್ ಸಿಂಧೂರದ ವೀರ ಚರಿತೆಯನ್ನು ಜಗತ್ತಿನ ಮುಂದೆ ಬಿಚ್ಚಿಟ್ಟು ಗಮನ ಸೆಳೆದಿದ್ದರು. ಇಡೀ ಜಗತ್ತು ಈ ಇಬ್ಬರು ವೀರವನಿತೆಯರ ಮಾತಿಗೆ ಕಿವಿಗೊಟ್ಟಿದ್ದು ಈಗ ಇತಿಹಾಸದ ಪುಟ ಸೇರಿದೆ. ಮತ್ತೆ ಅದೇ ದಿನಗಳನ್ನು ನೆನೆಯುವ, ಭಾರತೀಯ ಸೇನೆಯ ಸಾಹಸಗಾಥೆ ಸ್ಮರಿಸುವ ಉದ್ದೇಶದಿಂದ ಮಂಟದಪಲ್ಲಿ ಈ ಕಲಾಕೃತಿಗಳನ್ನು ಮಾಡಲಾಗಿದೆ.

ADVERTISEMENT

ಇಷ್ಟು ಮಾತ್ರವಲ್ಲ, ಸರ್ದಾರ್‌ ವಲ್ಲಭಭಾಯಿ ಪಟೇಲ್, ಸುಭಾಷಚಂದ್ರ ಬೋಸ್ ಅವರಂಥ ವೀರರ, ನಾಡ ನಾಯಕರ ಭಾವಚಿತ್ರಗಳು, ಸೇನೆಯ ಸಾಹಸಗಾಥೆಗಳು ಗಮನ ಸೆಳೆಯುವಂತಿವೆ. ಇಲ್ಲಿ ಗಣಪನ ಜತೆಗೆ ಸೇನಾಧಿಕಾರಿಗಳನ್ನೂ ದೇವರ ಸಮಾನ ಎಂದು ಪರಿಗಣಿಸಿ ದಿನವೂ ಪೂಜೆ ಮಾಡಲಾಗುತ್ತಿದೆ.

ಶನಿವಾರ ಕೂಟದಲ್ಲಿರುವ ವಿನಾಯಕನ ಕಥೆ ಇನ್ನೊಂದು ಅಭಿರುಚಿ ಹೊಂದಿದೆ. ಬಾಲ ಗಣಪ ಡಾಲ್ಫಿನ್‌ ಜತೆಗೆ ಚಲ್ಲಾಟವಾಡುವ ಮಾದರಿ ಇಲ್ಲಿದೆ. ದೇವಾನುದೇವತೆಗಳು ಗಣಪನಿಗೆ ಅನುಗ್ರಹ ನೀಡುವ ಸಂದೇಶ ಸಾರುವಂತಿದೆ. ನಾಥಪೈ ವೃತ್ತದಲ್ಲಿರುವ ಕಾಶಿ ವಿಶ್ವನಾಥನ ದರ್ಶನ, ಭಾತಕಾಂಡೆ ಗಲ್ಲಿಯಲ್ಲಿರುವ ಸನಾತನ ಸಂಸ್ಕೃತಿ ಬಿಂಬಿಸುವ ವಿನಾಯಕ, ಪಾಟೀಲ ಮಾಳದ ರಾಧಾಕೃಷ್ಣ ಅವತಾರಿ, ವಡಗಾವಿಯಲ್ಲಿರುವ ಮಹಾಭಾರತ ಸಂದೇಶ ಸಾರುವ ಪ್ರತಿಮೆಗಳು ಕೂಡ ಆಕರ್ಷಕವಾಗಿವೆ.

ಮಳೆ ಚಳಿ: ಭಕ್ತರ ನಿರುತ್ಸಾಹ

ಕಳೆದೊಂದು ತಿಂಗಳಿಂದ ನಿರಂತರ ಮಳೆ ಸುರಿದ ಕಾರಣ ನಗರದ ನಿವಾಸಿಗಳೂ ಸೇರಿದಂತೆ ಜಿಲ್ಲೆಯ ಭಕ್ತರಲ್ಲಿ ತುಸು ನಿರುತ್ಸಾಹ ಉಂಟಾಗಿದೆ. ಕಳೆದ ಬಾರಿಯಂತೆ ಅಪಾರ ಸಂಖ್ಯೆಯ ಭಕ್ತರು ಮೂರ್ತಿಗಳ ವೀಕ್ಷಣೆಗೆ ಬರುತ್ತಿಲ್ಲ ಎಂಬುದು ಮಂಡಳಗಳ ಮುಖಂಡರ ಅನಿಸಿಕೆ. ಪ್ರತಿ ವರ್ಷ ಐದನೇ ದಿನಕ್ಕೆ ಮನೆಯ ಗಣಪತಿಗಳನ್ನು ವಿಸರ್ಜನೆ ಮಾಡಿದ ಬಳಿಕ ಹಳ್ಳಿಯ ಜನ ನಗರಕ್ಕೆ ಮುಗಿಬೀಳುತ್ತಿದ್ದರು. ಉಳಿದ ಐದು ದಿನ ನಗರದಲ್ಲಿ ರಾತ್ರಿಯಿಡೀ ಓಡಾಡಿ ಗಣಪನ ಸಂಭ್ರಮ ವೀಕ್ಷಿಸುತ್ತಿದ್ದರು. ಈಗಲೂ ಜನಜಂಗುಳಿ ಅಲ್ಲಲ್ಲಿ ಕಂಡುಬರುತ್ತಿದೆ. ಆದರೆ ಪದೇಪದೇ ಬೀಳುತ್ತಿರುವ ಮಳೆ ಹಾಗೂ ವಿಪರೀತ ಚಳಿಯ ಕಾರಣ ಭಕ್ತರ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆಯಾಗಿದೆ.

ಬೆಳಗಾವಿಯ ಶನಿವಾರ ಕೂಟದಲ್ಲಿ ಪ್ರತಿಷ್ಠಾಪಿಸಿದ ಪೌರಾಣಿಕ ಕಥಾನಕ ಪ್ರತಿಬಿಂಬಿಸುವ ವಿನಾಯಕನ ಮೂರ್ತಿ ಪ್ರಜಾವಾಣಿ ಚಿತ್ರ
ಬೆಳಗಾವಿಯ ಬುರಡ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಪರಿಸರ ಸಂದೇಶ ಸಾರುವ ವಿಘ್ನ ನಿವಾರಕ  ಪ್ರಜಾವಾಣಿ ಚಿತ್ರ
ಬೆಳಗಾವಿಯ ಎಸ್‌ಬಿಐ ವೃತ್ತದಲ್ಲಿ ವಿನ್ಯಾಸಗೊಳಿಸಿದ ‘ಆಪರೇಷನ್‌ ಸಿಂಧೂರ’ ಸಾಹಸಗಾಥೆ ಸಾರುವ ಗಣಪನ ಮಂಟಪ  ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.