ADVERTISEMENT

ಬೆಳಗಾವಿ: ‘ಮೊದಲ ವಂದಿತ’ನಿಗೆ ಅದ್ಧೂರಿ ವಿದಾಯ

ಹರಿದುಬಂದ ಜನಸಾಗರ, ಎಲ್ಲೆಡೆ ಭಕ್ತಿಯ ಉನ್ಮಾದ, ಸಂಭ್ರಮದಿಂದ ಕುಣಿದು ಕುಪ್ಪಳಿಸಿದ ಯುವಪಡೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:54 IST
Last Updated 7 ಸೆಪ್ಟೆಂಬರ್ 2025, 7:54 IST
   

ಬೆಳಗಾವಿ: ಕುಂದಾನಗರಿಯಲ್ಲಿ ಶನಿವಾರ ಹಗಲು–ಇರುಳುಗಳು ಒಂದಾದವು. ಎಲ್ಲಿ ನೋಡಿದರೂ ಜನವೋ ಜನ, ಎತ್ತ ನೋಡಿದರೂ ಸಂಭ್ರಮವೋ ಸಂಭ್ರಮ. 11 ದಿನಗಳ ಕಾಲ ಪೂಜೆಗೊಂಡ ‘ಮೊದಲ ವಂದಿತ’ನಿಗೆ ಅದ್ಧೂರಿ ವಿದಾಯ. ಜಿಲ್ಲೆಯ ಮೂಲೆಮೂಲೆಯಿಂದ ಹರಿದುಬಂದ ಜನ ಗಜಮುಖನ ವೈಭವಕ್ಕೆ ಸಾಕ್ಷಿಯಾದರು.

ಇಳಿಸಂಜೆಯಲ್ಲಿ ತಂಗಾಳಿ ಸೂಸುವ ಹೊತ್ತಿಗೆ ಮೆರವಣಿಗೆಗೆ ಚಾಲನೆ ದೊರೆಯಿತು. ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ನಿಲ್ಲಿಸಿದ ಬೃಹತ್‌ ಮೂರ್ತಿಗಳು ಕಣ್ಮನ ಸೆಳೆದವು. ಝಗಮಗಿಸುವ ವಿದ್ಯುದ್ದೀಪಾಲಂಕಾರ, ಬೃಹತ್‌ ಸಂಗೀತ ಪರಿಕರಗಳು, ತಂಡೋಪತ ತಂಡವಾಗಿ ಬಂದ ಯುವಕ– ಯುವತಿಯರ ಪಡೆ. ಕಿವಿಗಡಚಿಕ್ಕುವ ವಾದ್ಯಮೇಳಕ್ಕೆ ಇನ್ನಿಲ್ಲದಂತೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು.

ಸಂಜೆ 5ರಿಂದ ರಾತ್ರಿ 8ರವರೆಗೂ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಸಣ್ಣ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಲಾಯಿತು. ರಾತ್ರಿಯಾಗುತ್ತಿದ್ದಂತೆಯೇ ಟ್ರ್ಯಾಕ್ಟರ್‌, ಗೂಡ್ಸ್‌ ವಾಹನಗಳಲ್ಲಿ ಇರಿಸಿದ ಬೃಹತ್‌ ಮೂರ್ತಿಗಳು ನಗರದ ಮೂಲೆಮೂಲೆಯಿಂದ ಒಂದೊಂದಾಗಿ ಬಂದು ಹುತಾತ್ಮ ಚೌಕದ ಬಳಿ ಸೇರಿದವು.

ADVERTISEMENT

ಹೆಜ್ಜೆಹೆಜ್ಜೆಗೂ ಬೃಹತ್‌ ಮೂರ್ತಿಗಳ ಆಡಂಬರ. ಝಗಮಗಿಸುವ ವಿದ್ಯುದ್ದೀಪಗಳ ವೈಭೋಗ, ಹಾಡು, ಕುಣಿತ, ಸಂಗೀತ ವಾದಕರು ಸಡಗರ, ಯುವ ಹೃದಯಗಳ ಹುಮ್ಮಸ್ಸು ಮೆರವಣಿಗೆಗೆ ಇನ್ನಿಲ್ಲದ ಕಳೆ ತಂದಿತು. ಕೆಲವು ಮಂಡಳಗಳು ಶಾಸ್ತ್ರೀಯ ಸಂಗೀತ, ಗೀತ ಗಾಯನ, ಭಜನೆ, ಡೋಲ್‌ತಾಶೆ, ಕೋಲು ಕುಣಿತ, ಹುಲಿ ವೇಶ ಮುಂತಾದ ಸಾಂಪ್ರದಾಯಿಕ ವಾದ್ಯ ಮೇಳಗಳ ಸಮೇತ ಗಮನ ಸೆಳೆದವು.

ಈ ಬಾರಿ ಡಾಲ್ಬಿ ಸಿಸ್ಟಮ್‌ನ ಸಂಗೀತಕ್ಕೆ ಈ ಬಾರಿ ಅವಕಾಶವಿಲ್ಲ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ್‌ ಬೊರಸೆ ತಾಕೀತು ಮಾಡಿದ್ದಾರೆ. ಅದಾಗಿಯೂ ಯುವ ಮಂಡಳಗಳು ದೈತ್ಯ ಡಾಲ್ಬಿಗಳನ್ನು ಹಚ್ಚಿ, ಕಿವಿಗಡಚಿಕ್ಕುವ ಸಂಗೀತಕ್ಕೆ ಹೆಜ್ಜೆ ಹಾಕಿದರು.

ದೇವಾ ಶ್ರೀಗಣೇಶ, ಗಣಪತಿ ಬಪ್ಪ ಮೋರಯಾ, ಪುಡಚಾ ವರ್ಷಿ ಲೋಕರಿಯಾ, ಜೈ ಭವಾನಿ, ಜೈ ಶಿವಾಜಿ ಮುಂತಾದ ಘೋಷಣೆಗಳು ನಿರಂತರ ಮೊಳಗಿದವು. ಸಿಡಿಮದ್ದು, ಪಟಾಕಿಗಳ ಭೋರ್ಗರೆತ ನಿರಂತರವಾಗಿತ್ತು. ಬಾನೆತ್ತರಕ್ಕೆ ಚಿಮ್ಮಿದ ಪಟಾಕಿಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು. ಮಹಾರಾಷ್ಟ್ರದಿಂದ ಬಂದ ಯುವತಿಯರ ನೃತ್ಯ, ಯುವತಿಯರದೇ ಡೋಲ್‌ ತಾಶಾ ತಂಡ, ಝಾಂಝ್‌ ಪಥಕ್‌, ಡೊಳ್ಳು ಮೇಳಗಳು, ಕೋಲಾಟದವರು, ವೇಷಗಾರರು, ಪೂರ್ಣಕುಂಭ ಹೊತ್ತವರು ಮೆರವಣಿಗೆಯ ವೈಭವ ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.