ADVERTISEMENT

ಬೆಳಗಾವಿ | ಗೃಹಲಕ್ಷ್ಮೀ ಅರ್ಜಿಗೆ ಹಣ ಕೊಡಬೇಡಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 14:24 IST
Last Updated 29 ಜೂನ್ 2023, 14:24 IST
ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮೀ ಹೆಬ್ಬಾಳಕರ   

ಬೆಳಗಾವಿ: ‘ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೂ ಯಾರಿಗೂ ದುಡ್ಡು ಕೊಡಬಾರದು’ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಒಂದು ರೂಪಾಯಿ ಕೂಡ ಖರ್ಚಿಲ್ಲದೆ ಮಹಿಳೆಯರಿಗೆ ಹಣ ನೀಡಬೇಕೆನ್ನುವುದು ಸರ್ಕಾರದ ಉದ್ದೇಶ. ಹಾಗಾಗಿ ಸೇವೆ ನೀಡುವ ಕೇಂದ್ರ ಮತ್ತು ವ್ಯಕ್ತಿಗಳಿಗೆ ಸರ್ಕಾರವೇ ಸೇವಾ ಶುಲ್ಕ ಎಂದು ಒಂದು ಅರ್ಜಿಗೆ ₹20 ನೀಡಲು ನಿರ್ಧರಿಸಿದೆ. ಹಾಗಾಗಿ ಯಾರಾದರೂ ಬಂದು ಹಣ ಕೊಡಿ ಎಂದು ಕೇಳಿದರೆ ಕೊಡಬೇಡಿ’ ಎಂದು ವಿನಂತಿಸಿದರು.

‘ಕೆಲವು ಕಡೆ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೇನೆ. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಮಹಿಳೆಯರ ಖಾತೆಗೆ ಹಣ ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಇದಕ್ಕೆ ಯಾರೂ ಅವಕಾಶ ಕೊಡಬಾರದು. ಅರ್ಜಿ ಸಲ್ಲಿಸಲು ಯಾವುದೇ ಸಮಯ ಮಿತಿ ಇಲ್ಲದಿರುವುದರಿಂದ ಯಾವುದೇ ಅವಸರವಿಲ್ಲದೆ ನಿಧಾನವಾಗಿ ಅರ್ಜಿ ಹಾಕಲು ಅವಕಾಶ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಕಳೆದ 4 ತಿಂಗಳಿನಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಲಿನ ಪೌಡರ್ ಪೂರೈಕೆಯಾಗುತ್ತಿಲ್ಲ. ದರ ಹೆಚ್ಚಳವಾಗಿದ್ದರಿಂದ ಹಾಲು ಪೂರೈಸಲು ಸಾಧ್ಯವಿಲ್ಲ ಎಂದು ಕೆಎಂಎಫ್‌ನವರು ನಿಲ್ಲಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದೂ ಹೆಬ್ಬಾಳಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.