ADVERTISEMENT

ವೈದ್ಯಕೀಯ ಆಕ್ಸಿಜನ್‌: ಬೆಳಗಾವಿ ಜಿಲ್ಲೆಯಲ್ಲಿ ಅವಲಂಬನೆ ತಪ್ಪಿಲ್ಲ

​ಪ್ರಜಾವಾಣಿ ವಾರ್ತೆ
Published 3 ಮೇ 2021, 8:03 IST
Last Updated 3 ಮೇ 2021, 8:03 IST

ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ 2–3 ದಿನಗಳಿಗಷ್ಟೇ ಸಾಕಾಗಬಹುದಾದಷ್ಟು ವೈದ್ಯಕೀಯ ಆಕ್ಸಿಜನ್ ಕೊರತೆ ಇದ್ದು, ನಿಯಮಿತವಾಗಿ ಪೂರೈಕೆ ಆಗದಿದ್ದಲ್ಲಿ ಕೊರತೆ ಎದುರಾಗುವ ಸಾಧ್ಯತೆ ಇದೆ. ನೆರೆಯ ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ಅವಲಂಬನೆ ತಪ್ಪಿಲ್ಲ. ಉತ್ಪಾದನೆಯಲ್ಲಿ ಸ್ವಾವಲಂಬಿ ಆಗುವುದು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಕ್ಸಿಜನ್‌ ಬೇಡಿಕೆಯೂ ಹೆಚ್ಚಾಗುತ್ತಿದೆ. ಧಾರವಾಡ ಹಾಗೂ ಬಳ್ಳಾರಿಯಿಂದ ಬರುವ ಆಕ್ಸಿಜನ್‌ ಅನ್ನು ಇಲ್ಲಿನ ಬಿಮ್ಸ್‌ ಆಸ್ಪತ್ರೆಯ ಘಟಕದಲ್ಲಿ ತುಂಬಿಟ್ಟುಕೊಂಡು, ಬೇಡಿಕೆ ಇರುವ ಕಡೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆ ಜಿಲ್ಲೆಗಳಿಂದ ದಿನ ಬಿಟ್ಟು ದಿನಕ್ಕೆ ಇಂತಿಷ್ಟು ಪ್ರಮಾಣದಲ್ಲಿ ಸರಬರಾಜಾಗುತ್ತಿದೆ.

ಜಿಲ್ಲಾಡಳಿತ ಸುಪರ್ದಿಯಲ್ಲಿ 200 ಆಕ್ಸಿಜನ್‌ ಸಿಲಿಂಡರ್‌ ಸಂಗ್ರಹ (ಬಫರ್ ಸ್ಟಾಕ್‌)ವಿದೆ.

ADVERTISEMENT

ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಹಿನ್ನೆಲೆಯಲ್ಲಿ ಐವರು ರೋಗಿಗಳನ್ನು ಭಾನುವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪ್ರಸ್ತುತ ನಿತ್ಯ 700 ಆಕ್ಸಿಜನ್‌ ಸಿಲಿಂಡರ್‌ಗಳಿಗೆ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಲಭ್ಯವಾಗುತ್ತಿದೆ. ಬೇಡಿಕೆ ಹೆಚ್ಚಿದಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ. ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ, ಕೊಲ್ಹಾಪುರದಿಂದ ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆಗೆ ತಡೆ ನೀಡಲಾಗಿದೆ. ಇದರಿಂದ ಶೇ 20ರಷ್ಟು ಕೊರತೆ ಉಂಟಾಗಿದ್ದು (ತಲಾ 13 ಕಿಲೋ ಲೀಟರ್‌ ಸಾಮರ್ಥ್ಯದ 2 ಟ್ಯಾಂಕರ್‌ ವಾರಕ್ಕೆ), ಬಳ್ಳಾರಿ ಮತ್ತು ಧಾರವಾಡದಿಂದ ದೊರೆಯುವುದರಿಂದ ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲಿಂದ ತರಿಸಿಕೊಳ್ಳುವುದಕ್ಕೆ ಆಗಾಗ ಟ್ಯಾಂಕರ್‌ಗಳ ಕೊರತೆ (ಬೇಡಿಕೆ ಹೆಚ್ಚುತ್ತಿರುವುದರಿಂದ) ಎದುರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಕ್ಸಿಜನ್ ಸಂಗ್ರಹಕ್ಕೆ ಬಿಮ್ಸ್‌ನಲ್ಲಿ 13 ಕಿಲೋ ಲೀಟರ್ ಸಾಮರ್ಥ್ಯದ ಘಟಕವಿದೆ. ಖಾಸಗಿ ಕೆಎಲ್‌ಇ ಆಸ್ಪತ್ರೆಯಲ್ಲಿ 13 ಕಿಲೋ ಲೀಟರ್‌, ಲೇಕ್‌ವ್ಯೂ ಹಾಗೂ ವೇಣುಗ್ರಾಮ ಆಸ್ಪತ್ರೆಯಲ್ಲಿ ತಲಾ 2 ಕಿಲೋ ಲೀಟರ್‌ ಸಾಮರ್ಥ್ಯದ ಘಟಕಗಳಿವೆ. ಹೊನಗಾದ ಎಂಎಸ್‌ಪಿಎಲ್‌ ಘಟಕ ಹಾಗೂ ನಿಪ್ಪಾಣಿಯ ಮಹಾ ಆಕ್ಸಿನಲ್ಲಿ ನಿತ್ಯ 300 ಸಿಲಿಂಡರ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಮಂಗಸೂಳಿಯ ಎಸ್‌.ಎಸ್. ಆಕ್ಸಿಜನ್‌ನಲ್ಲಿ 120 ಸಿಲಿಂಡರ್‌ ಮರುಪೂರಣ ಮಾಡುತ್ತಾರೆ. ಅಲ್ಲಿಂದ ಪಡೆಯಲಾಗುತ್ತಿದೆ.

‘ಜಿಲ್ಲೆಯ ಘಟಕಗಳಲ್ಲಿ ಉತ್ಪತ್ತಿಯಾಗುವ ಆಕ್ಸಿಜನ್ ಸಿಲಿಂಡರ್‌ಗಳನ್ನು ವೈದ್ಯಕೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಪೂರೈಸುವಂತೆ ಹಾಗೂ ಜಿಲ್ಲೆಯ ವ್ಯಾಪ್ತಿ ಬಿಟ್ಟು ಹೊರ ಹೋಗದಂತೆ ನೋಡಿಕೊಳ್ಳಬೇಕು. ವಾರಕ್ಕೆ ಬೇಕಾಗುವಷ್ಟು ಪ್ರಮಾಣದ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸಲು ಸಿದ್ಧತೆ ಮಾಡಿಕೊಂಡು ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಬೇಕು ಎಂದು ಸೂಚಿಸಲಾಗಿದೆ. ಬಳಕೆ ಪರಿಶೀಲನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ತಿಳಿಸಿದರು.

‘ಜಿಲ್ಲೆಯಲ್ಲಿ ಸದ್ಯಕ್ಕೆ ವೈದ್ಯಕೀಯ ಆಕ್ಸಿಜನ್ ಕೊರತೆ ಕಂಡುಬಂದಿಲ್ಲ. ಆದಾಗ್ಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಆಕ್ಸಿಜನ್ ಏಜೆನ್ಸಿ ಮತ್ತು ಪೂರೈಕೆದಾರರನ್ನು ಗುರುತಿಸಿ ಇನ್ನೂ ಹೆಚ್ಚು ಪಡೆಯಲು ಕ್ರಮ ವಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.