ಸವದತ್ತಿ ಬಳಿಯ ನವಿಲುತೀರ್ಥ ಅಣೆಕಟ್ಟಿನಿಂದ ಸೋಮವಾರ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಯಿತು
ಬೆಳಗಾವಿ: ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಕೆಲವು ತಾಲ್ಲೂಕಿನಲ್ಲಿ ಸೋಮವಾರ ಇಡೀ ದಿನ ಧಾರಾಕಾರ ಮಳೆ ಸುರಿಯಿತು. ಮುಂಜಾಗೃತಾ ಕ್ರಮವಾಗಿ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ತುರ್ತು ರಜೆ ಘೋಷಣೆ ಮಾಡಲಾಯಿತು. ಆ.19ರಂದು ಕೂಡ ರಜೆ ಮುಂದುವರಿಸಲಾಗಿದೆ.
ಬೆಳಗಾವಿ ನಗರ, ತಾಲ್ಲೂಕು, ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಸವದತ್ತಿ ಹಾಗೂ ಖಾನಾಪುರ ತಾಲ್ಲೂಕುಗಳಲ್ಲಿ ಸೋಮವಾರ ನಸುಕಿನ 3ರಿಂದಲೇ ಮಳೆ ಆರಂಭವಾಯಿತು. ಈ ತಾಲ್ಲೂಕುಗಳ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಬೆಳಿಗ್ಗೆಯೇ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರಜೆ ಘೋಷಣೆ ಮಾಡಿದರು. ಅಷ್ಟೊತ್ತಿಗಾಗಲೇ ಶಾಲೆಗೆ ಬಂದಿದ್ದ ಮಕ್ಕಳು ಮರಳಿ ಮನೆಗೆ ಹೋದರು.ಮಳೆ ಮುಂದುವರಿದ ಕಾರಣ ಮಂಗಳವಾರ (ಆ.19) ಕೂಡ ರಜೆ ಮುಂದುವರಿಸಲಾಗಿದೆ.
ಅಣೆಕಟ್ಟೆಗಳಿಂದ ನೀರು
ಘಟಪ್ರಭಾ ನದಿಯ ರಾಜಾ ಲಖಮಗೌಡ ಜಲಾಶಯ (ಹಿಡಕಲ್) ಶೇ 99ರಷ್ಟು ಭರ್ತಿಯಾಗಿದೆ. 13,337 ಕ್ಯೂಸೆಕ್ ನೀರು ನಿರಂತರ ಹರಿದುಬರುತ್ತಿದೆ. ಕಾರಣ, 30,800 ಕ್ಯೂಸೆಕ್ ನೀರನ್ನು ಯಾವುದೇ ಕ್ಷಣದಲ್ಲಿ ನದಿ ಪಾತ್ರಕ್ಕೆ ಹರಿಬಿಡಲಾಗುವುದು. ಘಟಪ್ರಭಾ ನದಿ ಹಾಗೂ ಹಿರಣ್ಯಕೇಶಿ ನದಿಯ ದಡದ ಗ್ರಾಮಗಳ ಜನ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸೋಮವಾರ ಸಂಜೆಯಿಂದ 10 ಕ್ರಸ್ಟ್‌ಗೇಟ್ ಮೂಲಕ 20,800 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. ಇದೇ ನದಿಗೆ ಕಟ್ಟಿದ ಶಿರೂರು ಕಿರು ಜಲಾಶಯದಿಂದಲೂ 2,300 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ಮಲಪ್ರಭಾ ನದಿಗೆ ನಿರ್ಮಿಸಿದ ಸವದತ್ತಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಲು ಒಂದೂವರೆ ಅಡಿ ಮಾತ್ರ ಬಾಕಿ ಇದೆ. 2079.50 ಸಾಮರ್ಥ್ಯದ ಅಣೆಕಟ್ಟೆಯಲ್ಲಿ 2077.50 ಅಡಿ ನೀರು ಸಂಗ್ರಹವಾಗಿದೆ. 10 ಕ್ಯೂಸೆಕ್ ನೀರು ನಿರಂತರವಾಗಿ ಅಣೆಕಟ್ಟೆಗೆ ಹರಿದುಬರುತ್ತಿದ್ದು, 9,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಭಾನುವಾರ 3,281 ಕ್ಯೂಸೆಕ್ ಒಳಹರಿವು, 1,194 ಕ್ಯೂಸೆಕ್ ಹೊರಹರಿವು ಇತ್ತು. 24 ಗಂಟೆಗಳಲ್ಲಿ ಗರಿಷ್ಠ ಮಳೆಯಾದ ಕಾರಣ ಯಥೇಚ್ಚ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೂಡ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಕಲ್ಲೋಳ– ಡೂರ ಸೇತುವೆ, ಮಲಿಕವಾಡ– ದತ್ತವಾಡ ಸೇತುವೆಗಳು ಜಲಾವೃತಗೊಂಡಿವೆ.
ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಬಳಿಯ ರಾಜಾ ಲಖಮಗೌಡ ಜಲಾಶಯದ 10 ಕ್ರಸ್ಟ್‌ಗೇಟ್ ಮೂಲಕ ಸೋಮವಾರ 20,800 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.