ADVERTISEMENT

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 14:34 IST
Last Updated 1 ಜನವರಿ 2026, 14:34 IST
   

ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಕೇಂದ್ರ ಕಾರಾಗೃಹದ ಹೊರಗಡೆಯಿಂದ ಜೈಲಿನೊಳಗೆ ಮೊಬೈಲ್ ಫೋನ್‌, ಮಾದಕವಸ್ತು ಮತ್ತು ಇತರೆ ವಸ್ತುಗಳನ್ನು ಎಸೆಯುತ್ತಿರುವ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಿಂಡಲಗಾ ಜೈಲಿಗೆ ಭೇಟಿ ನೀಡಿದ ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್) ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಘಟನೆಗಳು ಮತ್ತು ವಿಡಿಯೊಗಳ ದಿನಾಂಕಗಳ ಬಗ್ಗೆ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೈಲಿನ ಹೊರಗಡೆ ಭದ್ರತೆಯನ್ನು ಕೆಎಸ್‌ಐಎಸ್‌ಎಫ್‌ ಮತ್ತು ಒಳಗಡೆ ಭದ್ರತೆಯನ್ನು ಕಾರಾಗೃಹ ಮತ್ತು ಸೇವಾ ಸುಧಾರಣಾ ಸೇವೆಗಳ ಇಲಾಖೆ ನಿರ್ವಹಿಸುತ್ತಿತ್ತು. ಈ ಜೈಲು ಬೆಳಗಾವಿ ಗ್ರಾಮೀಣ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಗಳ ದಿನಾಂಕಗಳ ಕುರಿತು ಮಾಹಿತಿ ಕೇಳಿದ್ದೇವೆ’ ಎಂದರು.

ADVERTISEMENT

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಉತ್ತರ ವಲಯ ಐಜಿಪಿ ಟಿ.ಪಿ.ಶೇಷ, ‘ಈಚೆಗೆ ನಾವು ಜೈಲಿನೊಳಗೆ ಕಾರ್ಯಾಚರಣೆ ಹೆಚ್ಚಿಸಿದ್ದೇವೆ. 12 ಮೊಬೈಲ್‌ ಫೋನ್‌, 4 ಸಿಮ್ ಕಾರ್ಡ್‌, 5 ಚಾರ್ಜಿಂಗ್ ಕೇಬಲ್‌ಗಳು ಮತ್ತು ಅಡಾಪ್ಟರ್ ಸಿಕ್ಕಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪತ್ತೆಹಚ್ಚಿದ ಸಿಬ್ಬಂದಿಗೆ ₹22 ಸಾವಿರ ನಗದು ಬಹುಮಾನ ನೀಡಲಾಗಿದೆ’ ಎಂದರು.

‘ಕೆಎಸ್‌ಐಎಸ್‌ಎಫ್‌ ಜೈಲಿನ ಹೊರಗಿನ ಭದ್ರತೆ ನಿರ್ವಹಿಸುತ್ತದೆ. ಜನರು ಕಾರಾಗೃಹದ ಆವರಣ ಗೋಡೆಗಳ ಬಳಿ ಬಾರದಂತೆ ತಡೆಯುತ್ತದೆ. ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಗಳನ್ನು ಗಮನಿಸಿದರೆ, ಕೆಎಸ್‌ಐಎಸ್‌ಎಫ್‌ನವರು ಪ್ರಾಥಮಿಕವಾಗಿ ಲೋಪ ಎಸಗಿರುವುದು ಕಂಡುಬಂದಿದೆ’ ಎಂದು ಹೇಳಿದರು.

‘ಜೈಲಿನಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದು ನಿಜ. ಅಂಥವರ ಮೇಲೆ ಕ್ರಮ ಜರುಗಿಸಲಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.