
ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ಶವಾಗಾರದ ಮುಂದೆ ಶವಗಳಿಗಾಗಿ ಕಾಯುತ್ತ ನಿಂತ ಮೃತ ಕಾರ್ಮಿಕರ ಸಂಬಂಧಿಕರು
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಸಮೀಪದ ಮರಕುಂಬಿ ಗ್ರಾಮದ ಬಳಿ ಇರುವ ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತದಲ್ಲಿ ಗಾಯಗೊಂಡಿದ್ದ ಮತ್ತೆ ನಾಲ್ವರು ಕಾರ್ಮಿಕರು ಗುರುವಾರ ಮೃತಪಟ್ಟರು, ಇದರೊಂದಿಗೆ ಮೃತರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಇನ್ನೊಬ್ಬ ಕಾರ್ಮಿಕನ ಸ್ಥಿತಿ ಕೂಡ ಚಿಂತಾಜನಕವಾಗಿದೆ.
ಇನಾಮದಾರ್ ಸಕ್ಕರೆ ಕಾರ್ಖಾನೆಯ ಒಂದನೇ ಕಂಪಾರ್ಟಮೆಂಟಿನಲ್ಲಿ ಬುಧವಾರ ದುರಸ್ತಿ ಮಾಡುವಾಗ ಸ್ಫೋಟವಾಗಿತ್ತು. ಈ ವೇಳೆ ಬಾಯ್ಲರ್ ನಲ್ಲಿದ್ದ ಬಿಸಿ ಮಳ್ಳಿ ಕಾರ್ಮಿಕರ ಮೈ ಮೇಲೆ ಬಿದ್ದು 8 ಕಾರ್ಮಿಕರು ಗಾಯಗೊಂಡಿದ್ದರು.
ಗಾಯಗೊಂಡವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೈಲಹೊಂಗಲ ತಾಲ್ಲೂಕಿನ ನೇಸರಗಿ ಗ್ರಾಮದ ದೀಪಕ ಮುನವಳ್ಳಿ(31), ಖಾನಾಪುರ ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಸುದರ್ಶನ ಬನೋಶಿ(25), ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಅಕ್ಷಯ್ ಸುಭಾಷ ಚೋಪಡೆ(48) ಬುಧವಾರ ಮೃತಪಟ್ಟರು.
ಚಿಕಿತ್ಸೆಗೆ ಸ್ಪಂದಿಅದೇ ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ್ ಬಸಪ್ಪ ಸಾರವಾಡಿ(27), ಬೈಲಹೊಂಗಲ ತಾಲ್ಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಮಡಿವಾಳಪ್ಪ ಕಾಜಗಾರ್(28), ಬಾಗಲಕೋಟೆ ಮರೆಗುದ್ದಿ ಗ್ರಾಮದ ಗುರುನಾಥ ಭೀರಪ್ಪ ತಮ್ಮಣ್ಣವರ(38), ಅಥಣಿ ತಾಲ್ಲೂಕಿನ ಹೂಲಿಕಟ್ಟಿ ಮಂಜುನಾಥ ಗೋಪಾಲ ತೇರದಾಳ(31) ಅವರು ಗುರುವಾರ ಕೊನೆಯುಸಿರೆಳೆದರು.
ಒಬ್ಬರಾದ ಮೇಲೆ ಒಬ್ಬರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ, ಕಾರ್ಮಿಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಗೋಕಾಕ ತಾಲ್ಲೂಕಿನ ಗಿಳಿಹೊಸೂರ ಗ್ರಾಮದ ರಾಘವೇಂದ್ರ ಮಲ್ಲಪ್ಪ ಗಿರಿಯಾಳ(36) ಅವರಿಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಾಲೀಕರು ಯಾರು:
ಇನಾಮದಾರ್ ಸಕ್ಕರೆ ಕಾರ್ಖಾನೆ ಮಾಜಿ ಸಚಿವ ಡಿ.ಬಿ.ಇನಾಮದಾರ ಪುತ್ರ ವಿಕ್ರಮ್ ಇನಾಮದಾರ, ಪ್ರಭಾಕರ ಕೋರೆ, ವಿಜಯ ಮೆಟಗುಡ್ಡ ಅವರಿಗೆ ಸೇರಿದೆ. ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಕಾರ್ಮಿಕರಿಗೆ ಯಾವುದೇ ಭದ್ರತೆ ನೀಡದೇ ಇರುವುದೇ ದುರಂತಕ್ಕೆ ಕಾರಣ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.