ಬೆಳಗಾವಿ: ‘ಬೆಳಗಾವಿಯಲ್ಲಿ ಭೂ ಕಬಳಿಕೆ, ಅಗ್ರಮ ವರ್ಗಾವಣೆ ವಿಪರೀತವಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ಮಾಡಿದಾಗ ಇದು ಗೊತ್ತಾಗಿದೆ. ಯಾರದೋ ಆಸ್ತಿಯನ್ನು ಇನ್ಯಾರೋ ನಕಲಿ ದಾಖಲೆ ಸೃಷ್ಟಿ ಮಾಡಿ ಯಾರಿಗೋ ಮಾರಿದ್ದಾರೆ. ಇದು ಕಾನೂನು ಪ್ರಕಾರವೇ ನಡೆದ ಅಕ್ರಮ ದಂಧೆ. ಭೇಟಿ ನೀಡಿದ ಸಂದರ್ಭದಲ್ಲೇ ಮೂರು ಪ್ರಕರಣಗಳು ಪತ್ತೆಯಾಗಿವೆ. ಇನ್ನಷ್ಟು ಆಳಕ್ಕೆ ಇಳಿದು ನೋಡಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಸಂಬಂಧಿಸಿದ ಎಲ್ಲ ಅಧಿಕಾರಿಗಳ ಮೇಲೂ ಪ್ರಕರಣ ದಾಖಲಿಸಲಾಗುವುದು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಯಸ್ಸಾದ ನಾಗರಿಕರನ್ನೇ ಗುರಿಯಾಗಿ ಇಟ್ಟುಕೊಂಡು ಇಂಥ ಅಕ್ರಮ ನಡೆಸುತ್ತಿರುವುದು ಗೊತ್ತಾಗಿದೆ. ನೋಂದಣಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಲೋಪ ಎಸಗಿದ್ದಾರೆ’ ಎಂದರು.
‘ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳಲ್ಲೂ ಹಲವು ಪ್ರಕರಣಗಳನ್ನು ಇತ್ಯರ್ಥ ಮಾಡದೇ ಉಳಿಸಿಕೊಳ್ಳಲಾಗಿದೆ. ಜನರು ಕೇಳುವ ದಾಖಲೆ ನೀಡಲು ನೆಪಹೇಳಿಕೊಂಡು ವರ್ಷಗಟ್ಟಲೇ ಕಾಯಿಸಲಾಗುತ್ತಿದೆ. ಕೆಲಸ ವಿಳಂಬವಾಗುವುದಕ್ಕೆ ಸಿಬ್ಬಂದಿ ಕೊರತೆ ಕಾರಣ ಎಂದು ಸಮಜಾಯಿಷಿ ಹೇಳಿದ್ದಾರೆ. ತಹಶೀಲ್ದಾರರಿಗೂ ನೋಟಿಸ್ ನೀಡಿ ವಿವರ ಪಡೆದು ಪ್ರಕರಣ ದಾಖಲಿಸಲಾಗುವುದು’ ಎಂದು ಲೋಕಾಯುಕ್ತರು ಹೇಳಿದರು.
‘ಅಬಕಾರಿ ಇಲಾಖೆಗೆ ಭೇಟಿ ನೀಡಿದಾಗ ಮೇಲಧಿಕಾರಿಗಳೇ ಇರಲಿಲ್ಲ. ಅವರಿಗೂ ನೋಟಿಸ್ ನೀಡಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ– ಮಕ್ಕಳ ಆಸ್ಪತ್ರೆ ಕಟ್ಟಡ ಸೋರುತ್ತಿದ್ದು, ವಿದ್ಯುತ್ ಅವಘಡ ಸಂಭವಿಸುವ ಅಪಾಯವಿದೆ. ಇಲಾಖೆಯ ಮುಖ್ಯ ಕಾರ್ಯದರ್ಶಿ, ಆಸ್ಪತ್ರೆ ನಿರ್ದೇಶಕರ ಮೇಲೆ ಕೇಸ್ ದಾಖಲಿಸಲಾಗಿದೆ’ ಎಂದೂ ವಿವರಿಸಿದರು.
‘ಸ್ಮಾರ್ಟ್‌ಸಿಟಿ ಯೋಜನೆಯ ಕಚೇರಿ, ಮಹಾನಗರ ಪಾಲಿಕೆಯಲ್ಲಿ ಅನುದಾನ ದುರ್ಬಳಕೆಯಾದ ಅಂಶಗಳು ಕಂಡುಬಂದಿವೆ. ನೋಟಿಸ್ ನೀಡಿ ವಿವರ ಕೇಳಲಾಗಿದೆ. ಅಪರಾಧ ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗುವುದು’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಾಯುಕ್ತದಲ್ಲೂ ಸಿಬ್ಬಂದಿ ಕೊರತೆ’:
‘ಲೋಕಾಯುಕ್ತದಲ್ಲಿ ಕೂಡ ಸಿಬ್ಬಂದಿ ಕೊರತೆ ಕಾಡುತ್ತಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಕೇವಲ 35 ನ್ಯಾಯಮೂರ್ತಿಗಳು ಇದ್ದೇವೆ. ಹಗಲು– ರಾತ್ರಿ ಕೆಲಸ ಮಾಡಬೇಕಾಗಿದೆ. ನಾನು ಫೈಲುಗಳನ್ನು ಎತ್ತಿಕೊಂಡು ಮನೆಗೆ ಹೋಗಿ ಅಲ್ಲಿಯೂ ಕೆಲಸ ಮಾಡುವ ಸ್ಥಿತಿ ಇದೆ. ಈ ಸಮಸ್ಯೆ ನಿವಾರಿಸುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಆದರೆ ಕೆಲಸ ವಿಳಂಬವಾಗುತ್ತಿವೆ’ ಎಂದೂ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.