ಬೆಳಗಾವಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಡಿ ಸಾಲ ಸೌಲಭ್ಯ ಕೋರಿ ಬ್ಯಾಂಕುಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಅರ್ಹರಿಗೆ ಸಾಲ ಮಂಜೂರು ಮಾಡಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
‘ಬ್ಯಾಂಕ್‌ಗಳಲ್ಲಿ ಸಲ್ಲಿಕೆಯಾದ ಸಾಲದ ಅರ್ಜಿಗಳನ್ನು ವಿನಾಕಾರಣ ವಿಳಂಬ ಮಾಡಬಾರದು. ಅಗತ್ಯವಿರುವ ದಾಖಲೆ ಪಡೆದು, ಯೋಜನೆಯ ನೆರವು ಒದಗಿಸಬೇಕು’ ಎಂದು ನಿರ್ದೇಶನ ಕೊಟ್ಟರು.
‘ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಲಾಭವನ್ನು ಹೆಚ್ಚಿನ ಜನರಿಗೆ ತಲುಪಿಸಲು ಚಟುವಟಿಕೆ ಹಮ್ಮಿಕೊಳ್ಳಬೇಕು’ ಎಂದು ಕರೆಕೊಟ್ಟರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ‘ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಬೇಕು. ಬ್ಯಾಂಕ್ ದರೋಡೆ, ಕಳ್ಳತನ ಮತ್ತಿತರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು’ ಎಂದರು.
ಲೀಡ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ ಘೋಡಕೆ, ‘ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಸೇರಿ ಕೃಷಿ ರಂಗಕ್ಕೆ ₹1,406 ಕೋಟಿ, ಕೈಗಾರಿಕೆಗೆ ₹2,653.27 ಕೋಟಿ, ಗೃಹಸಾಲಕ್ಕೆ ₹75.03 ಕೋಟಿ ಸೇರಿದಂತೆ ₹10,801.80 ಕೋಟಿ ಸಾಲ ವಿತರಿಸಿವೆ. 36,237.48 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದೆ’ ಎಂದರು. ಜಿ.ಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಆರ್‌ಬಿಐ ಅಧಿಕಾರಿ ಆರ್.ಪ್ರಭಾಕರ, ನಬಾರ್ಡ್ ಅಧಿಕಾರಿ ಅಭಿನವ ಯಾದವ ಇದ್ದರು.
ಬೆಳಗಾವಿ ತಾಲ್ಲೂಕಿನ ಧಾಮಣೆ ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಕಾಗವಾಡ ಮಂಗಸೂಳಿಯಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾಪಿಸಬೇಕೆಂಬ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸಬೇಕುಜಗದೀಶ ಶೆಟ್ಟರ್ ಸಂಸದ
ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಸೇರಿ ₹10801.80 ಕೋಟಿ ಸಾಲ ವಿತರಿಸಿದ್ದು ಗಮನಾರ್ಹಪ್ರಶಾಂತ ಘೋಡಕೆ ಪ್ರಾದೇಶಿಕ ವ್ಯವಸ್ಥಾಪಕ ಲೀಡ್ ಬ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.