ADVERTISEMENT

ಬೆಳಗಾವಿ | ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ: ಇಡೀ ದಿನ ಕಾವೇರಿದ ಚರ್ಚೆ

ಒಣಪ್ರತಿಷ್ಠೆಯ ಕಣವಾದ ಮಹಾನಗರ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 12:45 IST
Last Updated 21 ಅಕ್ಟೋಬರ್ 2023, 12:45 IST
   

ಬೆಳಗಾವಿ: ಆಸ್ತಿ ಕರ ಪರಿಷ್ಕರಣೆ ಸಂಬಂಧವಾಗಿ ನಡೆದ ವಿದ್ಯಮಾನ ಮಹಾನಗರ ಪಾಲಿಕೆಯಲ್ಲಿ ಶನಿವಾರ ಕೋಲಾಹಲವನ್ನೇ ಸೃಷ್ಟಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಅಭಯ ಪಾಟೀಲ ನಡುವೆ ಒಣಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತು.

2023–24ನೇ ಸಾಲಿನಲ್ಲಿ ನಗರದ ಆಸ್ತಿ ಕರ ಪರಿಷ್ಕರಣೆ ಮಾಡಬೇಕು ಎಂದು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ಪಾಲಿಕೆ ಆಯುಕ್ತರು 2024–25ನೇ ಸಾಲಿನಲ್ಲಿ ಪರಿಷ್ಕರಣೆಗೆ ನಿರ್ಣಯಿಸಲಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ರವಾನೆಯಾಗಿದೆ. ಈ ಪ್ರಮಾದ ಹೇಗಾಯಿತು ಎಂಬ ಅಂಶ ಇಡೀ ದಿನ ವಾಗ್ಯುದ್ಧಕ್ಕೆ ಕಾರಣವಾಯಿತು.

ಶಾಸಕ ಅಭಯ ಪಾಟೀಲ ಮುಂದಾಳತ್ವದಲ್ಲಿ ಸೇರಿದ ಆಡಳಿತ ಗುಂಪಿನ 35 ಸದಸ್ಯರು ಬೆಳಿಗ್ಗೆಯಿಂದಲೂ ಅಧಿಕಾರಿಗಳನ್ನು ಕಾದ ಹಂಚಿನ ಮೇಲೆ ನಿಲ್ಲಿಸಿದರು. ಸಚಿವರ ಕೈಗೊಂಬೆಯಾದ ಅಧಿಕಾರಿಗಳು, ಪಾಲಿಕೆಗೆ ದ್ರೋಹ ಮಾಡಿದ್ದಾರೆ. ಅವರ ಮೇಲೆ ತನಿಖೆ ಆಗಬೇಕು ಎಂದೂ ಪಟ್ಟು ಹಿಡಿದರು.

ADVERTISEMENT

ಮಧ್ಯೆ ಮಾತನಾಡಿದ ಶಾಸಕ ಆಸೀಫ್‌ ಸೇಠ್‌ ಹಾಗೂ ಪಾಲಿಕೆ ಸದಸ್ಯ ಅಜೀಮ್‌ ‍ಪಟವೇಗಾರ, ‘ಗೊತ್ತುವಳಿ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮುನ್ನ ಮೇಯರ್‌ ಸಹಿ ಮಾಡಿರಲೇಬೇಕಲ್ಲ. ಅಥವಾ ನಕಲಿ ಸಹಿ ಮಾಡಲಾಗಿದೆಯೇ?’ ಎಂದು ಪ್ರಶ್ನಿಸಿದರು.

ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಾಳಯದ ಸದಸ್ಯರ ನಡುವೆ ತೀವ್ರ ಚಕಮಕಿ ನಡೆಯಿತು. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಪೀಠದ ಮೇಲಿದ್ದ ಮೇಯರ್‌ ಶೋಭಾ ಸೋಮನಾಚೆ ಮೌನಕ್ಕೆ ಜಾರಿದರು.

ಸೂಪರ್‌ಸೀಡ್‌ ಎಚ್ಚರಿಕೆ: ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ‘ಮೇಯರ್ ಶಾಸಕ ಅಭಯ ಪಾಟೀಲನ ಕೈಗೊಂಬೆ ಆಗಿದ್ದಾರೆ. ಆಸ್ತಿಕರ ಪರಿಷ್ಕರಣೆಯ ಮೂಲಪ್ರತಿಯನ್ನು ಈತನೇ ಕದ್ದಿರಬಹುದು’ ಎಂದು ಏಕವಚನದಲ್ಲಿ ಹರಿಹಾಯ್ದರು.

‘ಪಾಲಿಕೆ ಅಧಿಕಾರಿಗಳ ಅಕ್ರಮವನ್ನು ಕೇಂದ್ರ ಲೋಕಸೇವಾ ಯೋಗ (ಯುಪಿಎಸ್‌ಸಿ)ದ ಮೂಲಕ ತನಿಖೆಗೆ ಒಳಪಡಿಸಲಾಗುವುದು ಶಾಸಕ ಅಭಯ ಹೇಳಿದ್ದಾನೆ. ಇದು ನಿಯಮ ಬಾಹಿರ. ರಾಜ್ಯ ಸರ್ಕಾರವೇ ತನಿಖೆ ಮಾಡುತ್ತದೆ. ಬಿಜೆಪಿಯವರು ದಾರಿ ಬಿಟ್ಟು ಕೇಂದ್ರಕ್ಕೆ ಹೋದರೆ ನಾವು ಪಾಲಿಕೆಯನ್ನು ವಿಸರ್ಜನೆ ಮಾಡುತ್ತೇವೆ’ ಎಂದರು.

ಬಿಜೆಪಿ ಸದಸ್ಯರ ಪಲಾಯನ

ಚರ್ಚೆ ಇನ್ನೂ ನಡೆದಾಗಲೇ ಬಿಜೆಪಿ ಸದಸ್ಯರು ಎದ್ದುನಿಂತು ರಾಷ್ಟ್ರಗೀತೆ ಶುರು ಮಾಡಿದರು. ಸಚಿವ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಕುಳಿತಿದ್ದಾಗಲೇ ರಾಷ್ಟ್ರಗೀತೆ ಮೊಳಗಿತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ಸಿಗರು, ಬಿಜೆಪಿ ಸದಸ್ಯರು ಹಾಗೂ ಪಾಲಿಕೆ ಸಿಬ್ಬಂದಿ ಮೇಲೆ ಆಕ್ರೋಶ ಹೊರಹಾಕಿದರು. ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಖಂಡಿಸಿದರು.

ತನಿಖೆಗೆ ನಿರ್ಣಯ ಅಂಗೀಕಾರ

ಮಧ್ಯಾಹ್ನ ಸಭೆಗೆ ಬಂದ ಸಚಿವ ಸತೀಶ ಜಾರಕಿಹೊಳಿ, ‘ಗೊತ್ತುವಳಿಯಲ್ಲಿ ದಿನಾಂಕ ಬದಲಾಗಿದ್ದು ಸಣ್ಣತಪ್ಪು. ಇಷ್ಟು ದೊಡ್ಡದು ಮಾಡಬೇಕಿರಲಿಲ್ಲ. ನಿಮ್ಮ ಹಟವನ್ನೇ ನೀವು ಸಾಧಿಸುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ. ಪಾಲಿಕೆ ಅಧಿಕಾರಿಗಳ ಮೇಲೆ ಸಿಐಡಿ ಅಥವಾ ಸಿಒಡಿ ತನಿಖೆ ಆಗಲಿ’ ಎಂದರು.

ಈ ಮಾತಿನೊಂದಿಗೆ ಇಡೀ ದಿನದ ಚರ್ಚೆ ಏಕಾಏಕಿ ತನ್ನಗಾಯಿತು. ತನಿಖೆಗೆ ನಿರ್ಣಯಿಸಲಾಗಿದೆ ಎಂದು ಮೇಯರ್ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.