ADVERTISEMENT

ಸದಸ್ಯರ ಅನರ್ಹ ಪ್ರಕರಣ ನಗರಾಭಿವೃದ್ಧಿ ಇಲಾಖೆ ಎಡವಿದೆ: ಸಾಮಾಜಿಕ ಕಾರ್ಯಕರ್ತ ಸುಜಿತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:26 IST
Last Updated 13 ಜುಲೈ 2025, 5:26 IST
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ   

ಬೆಳಗಾವಿ: ‘ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮೇಯರ್ ಮಂಗೇಶ ಪವಾರ ಹಾಗೂ ಸದಸ್ಯ ಜಯಂತ ಜಾಧವ ಅವರು, ತಮ್ಮ ಪತ್ನಿಯರಿಗೆ ‘ತಿನಿಸು ಕಟ್ಟೆ’ಯಲ್ಲಿ ಹಂಚಿಕೆ ಮಾಡಿರುವ ಅಂಗಡಿಗಳ ಕುರಿತಾಗಿ ಘೋಷಿಸಿಲ್ಲ. ಅವರನ್ನು ಅನರ್ಹಗೊಳಿಸಬೇಕಿತ್ತು. ಈ ವಿಷಯದಲ್ಲಿ ನಗರಾಭಿವೃದ್ಧಿ ಇಲಾಖೆ ಎಡವಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ ಆರೋಪಿಸಿದರು.

‘ನನ್ನ ದೂರು ಆಧರಿಸಿ ಪವಾರ ಮತ್ತು ಜಾಧವ ಅವರನ್ನು ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ, ಈಗ ಇಬ್ಬರೂ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಜುಲೈ 28ರಂದು ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ’ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪವಾರ ಮತ್ತು ಜಾಧವ ಅವರು ತಮ್ಮ ಪತ್ನಿಯರ ಹೆಸರಿನಲ್ಲಿ ತಿನಿಸು ಕಟ್ಟೆಯಲ್ಲಿ ಅಂಗಡಿಗಳನ್ನು ಗುತ್ತಿಗೆಗೆ ಪಡೆದಿದ್ದಾರೆ. ಅವುಗಳು ಆದಾಯದ ಮೂಲಗಳಾಗಿವೆ. ಆದರೂ, ಆಸ್ತಿ ಮತ್ತು ಸಾಲದ ಮಾಹಿತಿಯಲ್ಲಿ ಈ ಸಂಗತಿ ಮರೆಮಾಚಿ ಕೆಎಂಸಿ ಕಾಯ್ದೆಯ ನಿಬಂಧನೆ ಸೆಕ್ಷನ್ 26 ಉಲ್ಲಂಘಿಸಿದ್ದಾರೆ. ಅವರನ್ನು ಅನರ್ಹಗೊಳಿಸಲು ಇದೊಂದು ಕಾರಣ ಸಾಕಾಗಿತ್ತು’ ಎಂದು ಹೇಳಿದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ರಾಜೀವ್‌ ಟೋಪಣ್ಣವರ, ‘ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ನಂತರ ಒಂದು ತಿಂಗಳೊಳಗೆ ಮತ್ತು ವರ್ಷಕ್ಕೊಮ್ಮೆ ಆಸ್ತಿ ಹಾಗೂ ಸಾಲದ ವಿವರಗಳ ಸಲ್ಲಿಕೆ ಕಡ್ಡಾಯ. ಇಲ್ಲದಿದ್ದರೆ ಕೆಎಂಸಿ ಕಾಯ್ದೆ ಸೆಕ್ಷನ್‌ 19ರ ಪ್ರಕಾರ ಅನರ್ಹರಾಗುತ್ತಾರೆ. ಪಾಲಿಕೆಯಲ್ಲಿ ಈಗ ಅಧಿಕಾರದಲ್ಲಿ ಇರುವ 58 ಸದಸ್ಯರ ಪೈಕಿ ಎಷ್ಟು ಜನರು ಮಾಹಿತಿ ನೀಡಿದ್ದಾರೆ ಎಂದು ಆರ್‌ಟಿಐನಡಿ ಕೇಳಿದ್ದೇನೆ. ಆದರೆ, ಇನ್ನೂ ಮಾಹಿತಿ ಸಿಕ್ಕಿಲ್ಲ’ ಎಂದು ತಿಳಿಸಿದರು.

‘ಇಬ್ಬರೂ ಸದಸ್ಯರು ಅನರ್ಹಗೊಂಡಿದ್ದಾರೆ. ಹಾಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದ್ದರೂ ಪಾಲಿಕೆಯ ಯಾವುದೇ ಪ್ರಕ್ರಿಯೆಗಳಲ್ಲಿ ಅವರು ಭಾಗವಹಿಸಬಾರದು. ಜನಸಾಮಾನ್ಯರಂತೆ ಇಬ್ಬರೂ ಪಾಲಿಕೆಗೆ ಭೇಟಿ ನೀಡಲಿ. ಆದರೆ, ಜನಪ್ರತಿಗಳಾಗಿ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.