ADVERTISEMENT

ಬೆಳಗಾವಿ ಮೇಯರ್ ಚುನಾವಣೆ: ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್‌ ಬೆಂಬಲಿತ ಸದಸ್ಯರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:29 IST
Last Updated 6 ಫೆಬ್ರುವರಿ 2023, 7:29 IST
   

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಮೇಯರ್‌, ಉಪಮೇಯರ್‌ ಚುನಾವಣೆಗೆ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಮೂವರು ಸದಸ್ಯರು ಮತ್ತೆ ನಾಡದ್ರೋಹಿ ಘೋಷಣೆ ಕೂಗಿದರು.

ಎಂಇಎಸ್‌ ಮುಖಂಡರೂ ಆಗಿರುವ ವೈಶಾಲಿ ಭಾತಖಾಂಡೆ ಉಪಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದರು. ಪಾಲಿಕೆ ಆವರಣ ಪ್ರವೇಶಿಸುತ್ತಿದ್ದಂತೆಯೇ ‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಖಾನಾಪುರ’ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು. ಅವರೊಂದಿಗೆ ಬಂದ ಇನ್ನಿಬ್ಬರು ಎಂಇಎಸ್‌ ಬೆಂಬಲಿತ ಸದಸ್ಯರೂ ಧ್ವನಿಗೂಡಿಸಿದರು.

ಕೇಸರಿ ಬಣ್ಣದ ‘ಕೊಲ್ಹಾಪುರಿ ಪೇಟಾ‘ ಧರಿಸಿ ಬಂದ ಮೂವರೂ ಘೋಷಣೆ ಮೊಳಗಿಸುತ್ತಲೇ ಪಾಲಿಕೆ ಪ್ರವೇಶಿಸಿದರು.

ADVERTISEMENT

ಬಿಗಿ ಭದ್ರತೆ: ಪಾಲಿಕೆ ಚುನಾವಣೆ ನಡೆದ ಒಂದೂವರೆ ವರ್ಷದ ಬಳಿಕ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆ ನಡೆಯುತ್ತಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದರಿಂದ ಸದಸ್ಯರ ಬೆಂಬಲಿಗರು ಪಾಲಿಕೆ ಸುತ್ತ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ.
ಬಿಗಿ ಭದ್ರತೆ ಏರ್ಪಡಿಸಿರುವ ಪೊಲೀಸರು 200 ಮೀಟರ್‌ ವ್ಯಾಪ್ತಿಯಲ್ಲಿ 144 ಕಲಂ ಜಾರಿ ಮಾಡಿದ್ದಾರೆ. ನಾಲ್ಕಕ್ಕೂ ಹೆಚ್ಚು ಜನ ನಿಷೇಧಾಜ್ಞೆ ಇರುವ ಸ್ಥಳದಲ್ಲಿ ಸೇರದಂತೆ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.