ಬೆಳಗಾವಿ: ‘ಪ್ರವಾಹ ಮತ್ತು ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಜಿಲ್ಲೆಯ ಇಬ್ಬರೂ ಸಚಿವರು ಜನರ ನೆರವಿಗೆ ಧಾವಿಸದೆ ಚುನಾವಣೆಗಳ ಹಿಂದೆ ಬಿದ್ದಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವಾಹ, ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. 1 ಲಕ್ಷ ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲೇ ನಿರತವಾಗಿದ್ದಾರೆ. ಪ್ರವಾಹಪೀಡಿತ ಸ್ಥಳಕ್ಕೆ ಹೋಗಿ ಜನರ ಸಂಕಷ್ಟ ಆಲಿಸುತ್ತಿಲ್ಲ’ ಎಂದು ದೂರಿದರು.
‘ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹೊಸ್ತಿಲಲ್ಲೇ, ಸಚಿವ ಸತೀಶ ಜಾರಕಿಹೊಳಿ ಹುಕ್ಕೇರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಿದ್ದಾರೆ. ಮತ್ತೊಂದೆಡೆ ಖಾನಾಪುರ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪಿಕೆಪಿಎಸ್‌ಗಳಿಗೆ ಅನುದಾನ ನೀಡಿದ್ದಾರೆ. ಇವೆಲ್ಲವೂ ಚುನಾವಣೆ ಗಿಮಿಕ್’ ಎಂದು ಆಪಾದಿಸಿದರು.
ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಮಾತ್ರವಲ್ಲ; ಬಿಜೆಪಿಯ ಶಾಸಕರು ಓಡಾಡುತ್ತಿರುವ ಕುರಿತ ಪ್ರಶ್ನೆಗೆ, ಸರಿಯಾಗಿ ಉತ್ತರಿಸದೆ ಜಾರಿಕೊಂಡರು.
‘ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಮಳೆಯಿಂದ ಸಂಕಷ್ಟ ಎದುರಿಸುತ್ತಿರುವ ಜನರ ನೆರವಿಗೆ ಧಾವಿಸಿ, ಧೈರ್ಯ ತುಂಬಬೇಕಿದ್ದ ರಾಜ್ಯ ಸರ್ಕಾರ, ಜಾತಿ ಮತ್ತು ಸಾಮಾಜಿಕ ಶೈಕ್ಷಣಿಕ ಹಿಂದೆ ಬಿದ್ದಿದೆ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೂ, ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು ಮತ್ತು ಸೂರ್ಯಕಾಂತಿ ಖರೀದಿಗಾಗಿ ಕೇಂದ್ರ ತೆರೆಯದೆ ರೈತರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ‘ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಕೊಟ್ಟಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಕಡಿಮೆ ಪರಿಹಾರ ಘೋಷಿಸಿದೆ. ಆದರೆ, ಅದನ್ನೂ ಕೊಟ್ಟಿಲ್ಲ. ಮನೆ ಕಳೆದುಕೊಂಡವರ ಬದುಕೀಗ ಬದುಕೀಗ ಬೀದಿಗೆ ಬಂದಿದೆ’ ಎಂದು ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.