
ಬೆಳಗಾವಿ: ಇಲ್ಲಿನ ಹೊಸ ಗಾಂಧಿನಗರದಲ್ಲಿ ಶನಿವಾರ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದು ಭಾವಿಸಿ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಟ್ಟೆ ಹರಿದು ಅರೆಬೆತ್ತಲೆ ಮಾಡಿ, ಕಾಲಿನಿಂದ ಒದ್ದು ಹಿಂಸೆ ಕೊಟ್ಟಿದ್ದಾರೆ. ಇದರಿಂದ ಸ್ಥಳದಲ್ಲಿ ವಾತಾವರಣ ಕೆಲಕಾಲ ದ್ವೇಷಮಯವಾಗಿತ್ತು
ಸುಮಾರು 35 ವರ್ಷ ವಯಸ್ಸಿನ ಮಹಿಳೆ ರಂಜಾನ್ ಮಾಸದ ಅಂಗವಾಗಿ ಹೊಸ ಗಾಂಧಿ ನಗರದ ಮುಸ್ಲಿಮರ ವಸತಿ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದರು. ಬಿಸಿಲಿನ ಧಗೆಯ ಕಾರಣ ಹತ್ತಿರದ ಕಟ್ಟಡವೊಂದರ ಮುಂದೆ ಕುಳಿತಿದ್ದರು. ಅವರನ್ನು ಕಂಡು ಅನುಮಾನಗೊಂಡ ಇತರ ಮಹಿಳೆಯರು ಪುರುಷರಿಗೆ ತಿಳಿಸಿದರು.
ಈಕೆ ಮಕ್ಕಳನ್ನು ಕಳವು ಮಾಡಲು ಬಂದಿದ್ದಾಳೆ ಎಂದು ಕೂಗಿ ಕರೆದರು. ಕೆಲವೇ ನಿಮಿಷಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಮಹಿಳೆಯನ್ನು ಎಳೆದಾಡಿ ಪ್ರಶ್ನಿಸಿದರು. ಆಕೆ ಎಷ್ಟು ಬೇಡಿಕೊಂಡರೂ ಬಿಡದೇ ಮುಷ್ಟಿಗೆ ಮಾಡಿ ಹೊಟ್ಟೆ, ಎದೆ, ಭುಜ, ತಲೆ, ಮುಖಕ್ಕೆ ಗುದ್ದಿದರು. ಕಾಲಿನಿಂದ ಒದ್ದು ಕೆಳಗೆ ಕೆಡವಿದರು. ಕೆಲವರು ರವಿಕೆ ಹರಿದು ಓಡಿಸಿದರು. ಕೂದಲು ಹಿಡಿದು ಎಳೆದಾಡಿದರು. ಪುರುಷರ ಜತೆಗೆ ಕೆಲ ಮಹಿಳೆಯರೂ ಬೆನ್ನತ್ತಿ ಹೊಡೆದರು. ಸುತ್ತ ಸೇರಿದ ಹಲವರು ಇದರ ವಿಡಿಯೊ ಮಾಡಿಕೊಂಡರು.
ಸ್ಥಳಕ್ಕೆ ಧಾವಿಸಿದ ಮಾಳಮಾರುತಿ ಠಾಣೆಯ ಪೊಲೀಸರು, ಮಹಿಳೆಯನ್ನು ರಕ್ಷಿಸಿ ತಗಡಿನ ಶೆಡ್‌ವೊಂದರಲ್ಲಿ ಇರಿಸಿದರು. ಅಲ್ಲಿಗೂ ನುಗ್ಗಿದ ಇತರ ಮಹಿಳೆಯರ ಕೆನ್ನೆಗೆ ಹೊಡೆದರು. ಕಾನೂನು ಕೈಗೆತ್ತಿಕೊಳ್ಳದಂತೆ ಪೊಲೀಸರು ಎಷ್ಟೇ ವಿನಂತಿಸಿದರೂ ಜನ ಕೇಳಲಿಲ್ಲ. ಇದರಿಂದ ವಾದ– ವಾಗ್ವಾದ ಜೋರಾಯಿತು. ಯುವಕರು ಕೂಗಾಟ ಶುರು ಮಾಡಿದರು. ಕೊನೆಗೆ ಮಹಿಳೆಯನ್ನು ವಾಹನದಲ್ಲಿ ಹತ್ತಿಸಿಕೊಂಡ ಪೊಲೀಸರು ಠಾಣೆಯತ್ತ ಕರೆದೊಯ್ದುರು.
‘ಬೆಳಗಾವಿಯಲ್ಲಿ ಮಕ್ಕಳನ್ನು ಕಳ್ಳತನ ಮಾಡುವವರ ತಂಡ ಓಡಾಡುತ್ತಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ್ದಾರೆ. ಇದು ಜನರಲ್ಲಿ ಭಯ ಹುಟ್ಟಿಸಿದೆ. ಮಹಿಳೆ ಮೇಲೆ ಹಲ್ಲೆ ನಡೆಯುವುದಕ್ಕೆ ಇದೇ ಕಾರಣ. ಆ ಮಹಿಳೆಯನ್ನು ವಿಚಾರಣೆ ನಡೆಸಿದ್ದು, ಕಳ್ಳಿ ಅಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.
‘ಹಲ್ಲೆ ಮಾಡಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವಿಡಿಯೊಗಳನ್ನು ಪರಿಶೀಲಿಸಿ ಬಂಧಿಸಲಾಗುವುದು. ಜನ ಇಂಥ ಸುಳ್ಳು ಸುದ್ದಿಗೆ ಕಿವಿಗೊಡಬಾರದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.