ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮಂಗಳವಾರ ಪೇಟೆಯಲ್ಲಿ ಬುಧವಾರ ಮನೆಯ ಆಸ್ತಿ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮಂಗಳವಾರ ಪೇಟೆಯ ನಿವಾಸಿ ಗೀತಾ ರಂಜೀತ ದಾವಲೆ ಗವಳಿ (45) ಕೊಲೆಯಾದವರು. ಇವರ ಮೈದುನ ಗಣೇಶ ಲಕ್ಷ್ಮಣ ದಾವಲೆ ಗವಳಿ (50) ಆರೋಪಿ. ಆಸ್ತಿಯ ವಿಚಾರವಾಗಿ ತಂಟೆ ಇತ್ತು. ಬುಧವಾರ ಬೆಳಿಗ್ಗೆ ಇದೇ ವಿಚಾರವಾಗಿ ಜಗಳ ತೆಗೆದ ಗಣೇಶ ಗೀತಾ ಅವರನ್ನು ನೆಲಕ್ಕೆ ಕೆಡವಿ 15 ಬಾರಿ ಚಾಕುವಿನಿಂದ ಮನಬಂದಂತೆ ಇರಿದ. ತೀವ್ರ ರಕ್ತಸ್ರಾವದಿಂದ ಬಳಲಿದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗೀತಾ ಅವರ ಪತಿ 8 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ನಿಧನಾನಂತರ ಬೇರೆಯವರ ಮನೆಯ ಪಾತ್ರೆ ತೊಳೆದು ಗೀತಾ ಜೀವನ ಸಾಗಿಸುತ್ತಿದ್ದರು. ಅವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಕೊಲೆ ನಡೆದ ಸಂದರ್ಭದಲ್ಲಿ ಮಕ್ಕಳು ಮನೆಯಿಂದ ಹೊರಹೋಗಿದ್ದರು. ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ಸಾರಾಯಿ ಮಾರಿಕೊಂಡಿದ್ದ ಗಣೇಶ ಸಾಲ ಮಾಡಿದ್ದ. ಅದನ್ನು ತೀರಿಸಲು ಗೀತಾ ಅವರ ಬಳಿ ಪದೇಪದೇ ₹5 ಲಕ್ಷ ಬೇಡುತ್ತಿದ್ದ. ಅಥವಾ ಆಸ್ತಿಯನ್ನು ತನಗೇ ಬಿಟ್ಟುಕೊಡಬೇಕು ಎಂದು ಜಗಳ ಮಾಡುತ್ತಿದ್ದ ಎಂದು ಸಂಬಂಧಿಕರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟಿಳಕವಾಡಿ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.
ಕೆರೆಗೆ ಬಿದ್ದು ಆಟೊ ಚಾಲಕ ಆತ್ಮಹತ್ಯೆ
ಬೆಳಗಾವಿ: ಇಲ್ಲಿನ ಕೋಟೆ ಕೆರೆಯಲ್ಲಿ ಬಿದ್ದ ಆಟೊ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಕೆ.ಎಚ್. ಕಂಗ್ರಾಳಿಯ ನಿವಾಸಿ ಕಿರಣ ಲಕ್ಷ್ಮಣ ಮನಗುತ್ತಕರ (54) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಕುಗ್ಗಿದ್ದ ಕಿರಣ ಒಬ್ಬರೆ ಓಡಾಡಿಕೊಂಡಿದ್ದರು. ಸೆ.8ರಂದು ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಕೋಟೆ ಕೆರೆಯಲ್ಲಿ ಕಿರಣ ಶವ ಪತ್ತೆಯಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳ ಮದುವೆ ಮಾಡಿದ್ದ ಸಾಲ ತೀರಿಸಲಾಗದೆ ಕಿರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.