ADVERTISEMENT

ರಾಜ್ಯ ಬಂದ್‌ಗೆ ಬೆಳಗಾವಿ ಮುಸ್ಲಿಮರಿಂದ ಬೆಂಬಲ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 14:03 IST
Last Updated 16 ಮಾರ್ಚ್ 2022, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಶಾಲಾ–ಕಾಲೇಜುಗಳಲ್ಲಿ ಹಿಜಾಬ್ (ಶಿರವಸ್ತ್ರ) ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಪಿಎಫ್‌ಐ ವತಿಯಿಂದ ಗುರುವಾರ (ಮಾರ್ಚ್‌ 17) ಕರೆ ನೀಡಿರುವ ರಾಜ್ಯ ಬಂದ್‌ಗೆ ನಗರದಲ್ಲಿ ಬೆಂಬಲ ವ್ಯಕ್ತಪಡಿಸಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ.

ಮುಸ್ಲಿಮರು ಎಲ್ಲ ವ್ಯವಹಾರಗಳನ್ನು ಬಂದ್ ಮಾಡುವಂತೆ ಇಲ್ಲಿನ ಅಂಜುಮನ್ ಸಂಸ್ಥೆಯಿಂದ ಸೂಚಿಸಲಾಗಿದೆ.

ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ, ಕರ್ನಾಟಕ ಬಂದ್‌ಗೆ ಬೆಳಗಾವಿಯಲ್ಲಿ ಬೆಂಬಲ ನೀಡಲು ನಿರ್ಧರಿಸಲಾಯಿತು. ಉಲೇಮಾಗಳು ಕೂಡ ಪಾಲ್ಗೊಂಡಿದ್ದರು.

ADVERTISEMENT

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಫ್ತಿ ಅಬ್ದುಲ್ ಅಜೀದ್ ಖಾಜಿ, ‘ಹೈಕೋರ್ಟ್ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ ಮಾರ್ಚ್‌ 17ರಂದು ಸಮುದಾಯದ ಎಲ್ಲರೂ ವ್ಯವಹಾರಗಳನ್ನು ಬಂದ್ ಮಾಡುವಂತೆ ಕೋರಲಾಗಿದೆ. ಇಲ್ಲಿನವರೂ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

‘ಅಂಗಡಿಗಳನ್ನಷ್ಟೆ ಮುಚ್ಚುತ್ತೇವೆ. ಆದರೆ, ನಗರದಲ್ಲಿ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಜಿಲ್ಲಾಧಿಕಾರಿ ಅಥವಾ ಯಾವುದೇ ಕಚೇರಿಗೆ ಮನವಿ ಸಲ್ಲಿಸುವುದಿಲ್ಲ. ಯಾರೂ ಬೇರೆಯವರಿಗೆ ಅಂಗಡಿ ಮುಚ್ಚುವಂತೆ ಒತ್ತಾಯ ಮಾಡುವಂತಿಲ್ಲ. ಸ್ವಯಂಪ್ರೇರಿತರಾಗಿ ಬಂದ್ ಮಾಡಿ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.