ADVERTISEMENT

ಉಸ್ತುವಾರಿ ಸಚಿವರು ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 8:28 IST
Last Updated 15 ಜುಲೈ 2022, 8:28 IST
ಸತೀಶ ಜಾರಕಿಹೊಳಿ (ಸಂಗ್ರಹ ಚಿತ್ರ)
ಸತೀಶ ಜಾರಕಿಹೊಳಿ (ಸಂಗ್ರಹ ಚಿತ್ರ)   

ಬೆಳಗಾವಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಅವಾಂತರಗಳು ಉಂಟಾಗುತ್ತಿವೆ. ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರದೇ, ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಿಡಿ ಕಾರಿದರು.

‘ಗಡಿ ಜಿಲ್ಲೆಯಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ಈಗಾಗಲೇ ಶಾಲೆ, ಮನೆಗಳ ಕಟ್ಟಡಗಳೂ ಕುಸಿದಿವೆ. ಜೀವ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಗೋವಿಂದ ಕಾರಜೋಳ ಅವರು ತಕ್ಷಣ ಭೇಟಿ ನೀಡಿಬೇಕು. ಸ್ಥಳೀಯವಾಗಿ ಇದ್ದು ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಅವರು ನಗರದಲ್ಲಿ ಶುಕ್ರವಾರ ಮಧ್ಯಮಗಳ ಮುಂದೆ ಹೇಳಿದರು.

‘ಕೂಡಲೇ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಬೇಕು. ಸಂಭವನೀಯ ಪ್ರವಾಹ ನಿರ್ವಹಣೆಗೆ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯ ಜನ ಪ್ರವಾಹ, ಅತಿವೃಷ್ಟಿಯ ಕಾರಣ ತತ್ತರಿಸಿದ್ದಾರೆ. ಆದರೂ ಅಧಿಕಾರಿಗಳು ಪೂರ್ವನಿಯೋಜಿತ ತಯಾರಿ ಮಾಡಿಕೊಂಡಿಲ್ಲ. ಎಲ್ಲ ಅಧಿಕಾರಿಗಳೂ ಗ್ರಾಮ ಮಟ್ಟದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದರ ಜವಾಬ್ದಾರಿ ಹೊರುವ ಸಲುವಾಗಿಯಾದರೂ ಸಚಿವರು ಜಿಲ್ಲೆಗೆ ಬರಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ವಿಪಕ್ಷ ನಾಯಕ ಸಿದ್ದರಾಮ್ಯಯ ಅವರ ಜನ್ಮದಿನದ ಅಂಗವಾಗಿ ಅವರ ಅಮೃತ ಮಹೋತ್ಸವ ಆಯೋಜಿಸಲಾಗಿದೆ. ಆದರೆ, ಅದು ಸಿದ್ದರಾಮೋತ್ಸವ ಅಲ್ಲ. ಮೊದಲು ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಾರ್ಯಕ್ರಮ ಆಯೋಜಿಸಿದ್ದರು. ನಂತರ ಕೆ‍ಪಿಸಿಸಿ ಕೂಡ ಅದಕ್ಕೆ ಸಹಕಾರ ನೀಡಿದೆ. ಈ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.