ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು
(ಸಾಂದರ್ಭಿಕ ಚಿತ್ರ)
ಬೆಳಗಾವಿ: ಇಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ವ್ಯಾಪ್ತಿಯ ಪದವಿ 1, 3 ಮತ್ತು 5ನೇ ಸೆಮಿಸ್ಟರ್‌ನ ಇಂಗ್ಲಿಷ್ ವಿಷಯದ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಶೇ 41ರಷ್ಟು ಉಪನ್ಯಾಸಕರು ಇನ್ನೂ ಹಾಜರಾಗಿಲ್ಲ. ಇದರಿಂದ ಮೌಲ್ಯಮಾಪನಕ್ಕೆ ಹಿನ್ನಡೆ ಆಗುತ್ತಿದೆ.
‘ಆರ್‌ಸಿಯು ವ್ಯಾಪ್ತಿಗೆ ಬರುವ ಬೆಳಗಾವಿ, ವಿಜಯಪುರದ ಕಾಲೇಜುಗಳ ವಿವಿಧ ವಿಭಾಗಗಳ ಪದವಿ 1, 3 ಮತ್ತು 5ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದಾರೆ. 1.20 ಲಕ್ಷ ಉತ್ತರ ಪತ್ರಿಕೆಗಳಿದ್ದು, ಫೆ.5ರಿಂದ ಈವರೆಗೆ 75 ಸಾವಿರ ಉತ್ತರ ಪತ್ರಿಕೆಗಳ ಮೌಲ್ಯಮಾಪನವಾಗಿದೆ. 45 ಸಾವಿರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಗಬೇಕಿದೆ’ ಎಂದು ಆರ್‌ಸಿಯು ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ ಹೇಳಿದರು.
‘ಮೌಲ್ಯಮಾಪನಕ್ಕೆ ಹಾಜರಾಗಲು 192 ಜನರಿಗೆ ಆದೇಶಿಸಿದ್ದೇವೆ. ಈವರೆಗೆ 113 ಮಂದಿ ಹಾಜರಾಗಿದ್ದು, 79 ಮಂದಿ ಗೈರಾಗಿದ್ದಾರೆ. ಯುಜಿಸಿಯಿಂದ ವೇತನ ಪಡೆಯುವವರು, ಅತಿಥಿ ಶಿಕ್ಷಕರೂ ಈ ಪಟ್ಟಿಯಲ್ಲಿದ್ದಾರೆ. ಕರ್ತವ್ಯಕ್ಕೆ ಬಂದವರು ದಿನಕ್ಕೆ 40 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಾರೆ. ಒಂದು ವೇಳೆ ನಿಯೋಜನೆಗೊಂಡವರೆಲ್ಲ ಹಾಜರಾಗಿದ್ದರೆ, ಈ ಹೊತ್ತಿಗೆ ಮೌಲ್ಯಮಾಪನ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬರುತಿತ್ತು’ ಎಂದರು.
ಈ ಮಧ್ಯೆ ಫೆಬ್ರುವರಿ 20ರಿಂದ ಪದವಿ 2, 4 ಮತ್ತು 6ನೇ ಸೆಮಿಸ್ಟರ್‌ನ ತರಗತಿ ಆರಂಭಗೊಂಡಿವೆ. ‘ಕೆಲವರು ಮೌಲ್ಯಮಾಪನಕ್ಕೆ ಬಂದಿಲ್ಲ. ಹೀಗಿರುವಾಗ ನಾವಷ್ಟೇ ಏಕೆ ಮೌಲ್ಯಮಾಪನ ಮಾಡಬೇಕು. ನಮ್ಮನ್ನು ಪರೀಕ್ಷಾ ಕರ್ತವ್ಯದಿಂದ ಬಿಡುಗಡೆಗೊಳಿಸಿ’ ಎಂದು ಹಲವರು ಒತ್ತಾಯಿಸಿದ್ದಾರೆ.
ಸದ್ಯ ಮೌಲ್ಯಮಾಪನ ಮಾಡುತ್ತಿರುವವರು ಮಾತ್ರ ಕರ್ತವ್ಯ ನಿರ್ವಹಿಸಿದರೆ, ಈ ಪ್ರಕ್ರಿಯೆ ಮುಗಿಯಲು 10ಕ್ಕೂ ಹೆಚ್ಚು ದಿನ ಸಮಯ ಬೇಕು. ಮೌಲ್ಯಮಾಪನದ ನಂತರ ಪ್ರಕ್ರಿಯೆಗಳನ್ನೆಲ್ಲ ಮುಗಿಸಿ, ಫಲಿತಾಂಶ ಪ್ರಕಟಿಸಲು ತಡವಾಗಲಿದೆ. ವಿದ್ಯಾರ್ಥಿಗಳ ಮುಂದಿನ ಹಂತದ ಕಲಿಕೆಗೂ ತೊಂದರೆಯಾಗಲಿದೆ.
‘ಈಗೆಲ್ಲ ಬೇರೆ ಬೇರೆ ವಿಶ್ವವಿದ್ಯಾಲಯದವರು ಪರೀಕ್ಷೆ ಮುಗಿದ ತಿಂಗಳೊಳಗೆ ಫಲಿತಾಂಶ ಪ್ರಕಟಿಸುತ್ತಿದ್ದಾರೆ. ಆದರೆ, ಆರ್‌ಸಿಯುನವರು 1 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಮೌಲ್ಯಮಾಪನ ಮಾಡಿದರೆ ಹೇಗೆ’ ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಕಾಡುತ್ತಿದೆ.
‘ವಿವಿಧ ವಿಷಯಗಳ ಮೌಲ್ಯಮಾಪನ ಈಗ ಮುಗಿಯುವ ಹಂತಕ್ಕೆ ಬಂದಿದ್ದು, ತ್ವರಿತವಾಗಿ ಫಲಿತಾಂಶ ಪ್ರಕಟಿಸಲು ಪ್ರಯತ್ನ ನಡೆಸಿದ್ದೇವೆ. ಆದರೆ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರು ವಿಭಾಗಗಳ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದಾರೆ. ಹೀಗಿರುವಾಗ ಈ ವಿಷಯದ ಮೌಲ್ಯಮಾಪನವಾಗದೆ ಫಲಿತಾಂಶ ಪ್ರಕಟಿಸಲಾಗದು’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
ಮೌಲ್ಯಮಾಪನ ಆರಂಭವಾಗಿ 22 ದಿನಗಳಾದರೂ ಏಕೆ ಹಾಜರಾಗಿಲ್ಲ ಎಂದು ಗೈರಾದವರಿಗೆ ಷೋಕಾಸ್ ನೋಟಿಸು ಕೊಡುತ್ತೇವೆ. ತಕ್ಷಣವೇ ಹಾಜರಾಗುವಂತೆ ಸೂಚಿಸುತ್ತೇವೆ. ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.- ಪ್ರೊ.ರವೀಂದ್ರನಾಥ ಕದಂ ಮೌಲ್ಯಮಾಪನ ಕುಲಸಚಿವ ಆರ್‌ಸಿಯು ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.