ADVERTISEMENT

ಬೆಳಗಾವಿ– ಸಾಂಬ್ರಾ ರಸ್ತೆ ವಿಸ್ತರಣೆ ಶೀಘ್ರ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:30 IST
Last Updated 19 ಜುಲೈ 2022, 15:30 IST
ಗೋವಿಂದ ಕಾರಜೋಳ – ಸಂಗ್ರಹ ಚಿತ್ರ
ಗೋವಿಂದ ಕಾರಜೋಳ – ಸಂಗ್ರಹ ಚಿತ್ರ   

ಬೆಳಗಾವಿ: ‘ಬೆಳಗಾವಿ– ಸಾಂಬ್ರಾ ನಡುವೆ ಆರು ಪಥ ಅಥವಾ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಯನ್ನು ಪ್ರತ್ಯೇಕವಾಗಿ ಚರ್ಚಿಸಿ ತಕ್ಷಣವೇ ಮಂಜೂರು ಮಾಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ 2022-23ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿ ಆದಷ್ಟು ಬೇಗನೇ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಆರು ಪಥದ ರಸ್ತೆಗೆ ₹ 112 ಕೋಟಿ ಹಾಗೂ ಚತುಷ್ಪಥ ನಿರ್ಮಾಣಕ್ಕೆ ₹ 84 ಕೋಟಿ ಅಗತ್ಯವಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯ ಮಾರ್ಗಸೂಚಿ ಪ್ರಕಾರ ಶಾಲೆಗಳ ಕಾಂಪೌಂಡ್, ನೆಲಹಾಸು, ಗ್ರಾಮೀಣ ರಸ್ತೆ ದುರಸ್ತಿ ಸೇರಿದಂತೆ ಸಾಧ್ಯವಿರುವ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು, ನಾಯಿ ಕಚ್ಚಿದ ಔಷಧಿಗಳು ಸೇರಿದಂತೆ ಎಲ್ಲ ಅಗತ್ಯ ಚಿಕಿತ್ಸೆಯೂ ಸಿಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಗೊಬ್ಬರ ನೀಡದವರ ಮೇಲೆ ಕ್ರಮ ವಹಿಸಿ: ಜಿಲ್ಲೆಯಲ್ಲಿ ಗೊಬ್ಬರ ಕೊರತೆ ಇದ್ದರೆ ಅಧಿಕಾರಿಗಳು ತಕ್ಷಣ ಮಾಹಿತಿ ನೀಡಬೇಕು. ಗೊಬ್ಬರ ದಾಸ್ತಾನು ಇದ್ದರೂ ರೈತರಿಗೆ ನೀಡದವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ‘ಗ್ರಾಮ ಮಟ್ಟದಲ್ಲಿ ಸರ್ಕಾರಿ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸುವುದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಿವಿಧ ವಸತಿ ಯೋಜನೆಳ ಫಲಾನುಭವಿಗಳು ಪರದಾಡುವಂತಾಗಿದೆ’ ಎಂದು ಕಿಡಿ ಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ‘ವಸತಿ ಯೋಜನೆಗಳ ವಂತಿಕೆ ಬಾಕಿ ಇರುವವರ ಮಾಹಿತಿಯನ್ನು ಶಾಸಕರಿಗೆ ಒದಗಿಸಬೇಕು. ಯೋಜನೆಗಳ ಲಾಭ ತ್ವರಿತ ಮತ್ತು ಸಮರ್ಪಕ ಅನುಷ್ಠಾನ ದೃಷ್ಟಿಯಿಂದ ಅಧಿಕಾರಿಗಳು ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಕೂಡ ಭಾಗವಹಿಸಬೇಕು’ ಎಂದು ಸೂಚಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಲೆಗಳ ಕಟ್ಟಡಗಳು, ಅಡುಗೆ ಕೋಣೆಗಳು ಶಿಥಿಲಗೊಂಡಿವೆ. ಇವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಿರೇಬಾಗೇವಾಡಿಯಲ್ಲಿ ಕಸ ವಿಲೇವಾರಿಗೆ ಜಾಗೆ ಇಲ್ಲದಂತಾಗಿದೆ. ಇದಕ್ಕಾಗಿ ಎರಡು ಎಕರೆ‌ ಜಾಗೆಯನ್ನು ಒದಗಿಸಬೇಕು ಎಂದೂ ಕೋರಿದರು.

ಹಲಗಾ- ಬಸ್ತವಾಡ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಲಜೀವನ ಮಿಷನ್ ಯೋಜನೆಯಡಿ ಈ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಟೆಂಡರ್ ಕರೆಯುತ್ತಿಲ್ಲ ಎಂದು ಸಚಿವರ ಗಮನ ಸೆಳೆದರು.

ಈ ಗ್ರಾಮಗಳ ಪ್ರತಿ ಮನೆಗಳಿಗೆ ನಳ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕ ದುರ್ಯೋಧನ ಐಹೊಳೆ, ಶಾಸಕ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಮುಖ್ಯಾಧಿಕಾರಿ ಮೇಲೆ ಕೇಸ್‌ ಹಾಕಿ

‘ರಾಯಬಾಗದಲ್ಲಿ ಮೀನುಗಾರಿಕೆ ಇಲಾಖೆಯ ಜಾಗವನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಆದರೆ, ಈವರೆಗೂ ಪಟ್ಟಣ ಪಂಚಾಯಿತಿ ಅಧಿಕಾರಿ ತೆರವುಗೊಳಿಸಿಲ್ಲ’ ಎಂದು ಶಾಸಕ ದೂರಿದರು.

ಇದರಿಂದ ಕೋಪಗೊಂಡ ಸಚಿವ ಕಾರಜೋಳ, ‘ರಾಯಬಾಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಜೀವ ಮಾಂಗ ಹಾಗೂ ಅತಿಕ್ರಮಣ ಮಾಡಿದ ವ್ಯಕ್ತಿ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಿ. ಆ ಜಾಗವು ಖಾಸಗಿ ವ್ಯಕ್ತಿಗೆ ಸೇರಿದ್ದ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿದ ಅಧಿಕಾರಿಯನ್ನು ನಾಳೆಯೇ ಬಂಧಿಸಿ ಜೈಲಿಗಟ್ಟಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಸಚಿವ– ಶಾಸಕರ ಮಧ್ಯೆ ವಾಗ್ವಾದ

‘ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ಇದುವರೆಗೆ ವೈದ್ಯರನ್ನು ನಿಯೋಜಿಸಿಲ್ಲ. ಐದು ತಿಂಗಳಿನಿಂದ ಸರ್ಜನ್ ಇಲ್ಲದಿದ್ದರೆ ಜನರ ಗತಿ ಏನು?‘ ಎಂದು ಶಾಸಕ ಮಹಾಂತೇಶ ಕೌಜಲಗಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವ ಕಾರಜೋಳ ಅವರು, ತಕ್ಷಣವೇ ವೈದ್ಯರನ್ನು ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಯಾವಾಗಲೂ ಹೀಗೇ ಹೇಳುತ್ತೀರಿ, ಕೆಲಸ ಮಾಡುವುದಿಲ್ಲ’ ಎಂದು ಶಾಸಕ ತಕರಾರು ತೆಗೆದರು.

ಶಾಸಕ ಲಕ್ಷ್ಮಿ ಹೆಬ್ಬಳಕರ ಸಹ ಇದಕ್ಕೆ ದನಿಗೂಡಿಸಿದರು.

ಇದರಿಂದ ರೋಸಿಹೋದ ಸಚಿವ ಕಾರಜೋಳ, ‘ಇದೇನು ವಿಧಾನಸೌಧ ಅಲ್ಲ. ಪ್ರಗತಿ ಪರಿಶೀಲನಾ ಸಭೆ. ಇಲ್ಲಿಯೂ ರಾಜಕೀಯ ಮಾತನಾಡಬೇಡಿ. ನೀವು ಪ್ರಚಾರಕ್ಕಾಗಿಯೇ ಈ ರೀತಿ ಮಾಡುತ್ತೀರಿ ಎಂದು ನನಗೆ ಗೊತ್ತಿದೆ. ನಿಮ್ಮ ಕೆಲಸ ಮಾಡಿಕೊಡಲಾಗುವುದು ಕುಳಿತುಕೊಳ್ಳಿ’ ಎಂದು ಏರು ದನಿಯಲ್ಲೇ ಪ್ರತಿಕ್ರಿಯಿಸಿದರು.

ವೈದ್ಯರ ನಿರ್ಲಕ್ಷ್ಯದಿಂದ ಮಕ್ಕಳ ಸಾವು

‘ರಾಮದುರ್ಗದಲ್ಲಿ ಲಸಿಕೆ ನೀಡಿದ್ದರಿಂದ ಮೂರು ಮಕ್ಕಳ ಸತ್ತಿದ್ದಾರೆ. ಆ ಲಸಿಕೆ ಗುಣಮಟ್ಟ ಸರಿಯಾಗಿದೆ ಎಂದು ವರದಿ ಬಂದಿದೆ. ಹಾಗಾದರೆ ಮಕ್ಕಳ ಸಾವು ಏಕೆ ಸಂಭವಿಸಿತು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಪ್ರಶ್ನಿಸಿದರು.

ಮಕ್ಕಳಿಗೆ ಜ್ವರ ಇದ್ದ ಸಂದರ್ಭದಲ್ಲಿ ಲಸಿಕೆ ನೀಡಿರುವುದು ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಡಿ ಉತ್ತರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧರಿತ ವೈದ್ಯ, ನರ್ಸ್ ಹಾಗೂ ಫಾರ್ಮಸಿಸ್ಟ್‌‌ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.