ಚಿಕ್ಕೋಡಿ: ಪಟ್ಟಣದ ವಿದ್ಯಾನಗರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಿಂದಲೇ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಶಾಲಾ ಬಾಲಕನೊಬ್ಬ ಸಮಯ ಪ್ರಜ್ಞೆ ಮೆರೆದಿದ್ದರಿಂದ ಈ ಅಪಹರಣ ವಿಫಲವಾಗಿದೆ.
ಎರಡನೇ ತರಗತಿಯ ಬಾಲಕಿ ಸಂಜೆ 4ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದಳು. ಪಕ್ಕದಲ್ಲೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಹೊಂಚು ಹಾಕಿ ಕುಳಿತಿದ್ದ ಆರೋಪಿ ಬಾಲಕಿಯ ಬಾಯಿ ಮುಚ್ಚಿ ಹೊತ್ತುಕೊಂಡು ಹೋಗುತ್ತಿದ್ದ. ಇದನ್ನು ಕಿಟಕಿಯಿಂದ ನೋಡಿದ ಇನ್ನೊಬ್ಬ ಬಾಲಕ ಕೂಗಾಡಿ ತಮ್ಮ ಶಿಕ್ಷಕಿಗೆ ತಿಳಿಸಿದ.
ಶಿಕ್ಷಕರು ಹೊರಗೆ ಓಡಿಬಂದು ನೋಡಿದ್ದಾರೆ. ಅಷ್ಟರಲ್ಲಿ ಬಾಲಕಿಯೇ ಆರೋಪಿಯ ಕೈ ಕಚ್ಚಿ ತಪ್ಪಿಸಿಕೊಂಡು ಶಿಕ್ಷಕರತ್ತ ಓಡಿಬಂದಿದ್ದಾಳೆ. ತಕ್ಷಣ ಶಿಕ್ಷಕರು ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕಲಮರಡಿ, ಪಿಎಸ್‍ಐ ಬಸಗೌಡ ನೇರ್ಲಿ ಸ್ಥಳಕ್ಕೆ ಧಾವಿಸಿದರು. ಮುಖ್ಯ ಶಿಕ್ಷಕಿ ಪ್ರೇಮಲತಾ ಎ.ಎಂ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಚಿಕ್ಕಮಕ್ಕಳಿಗೆ ಚಾಕೊಲೇಟ್, ಬಿಸ್ಕತ್ ಕೊಡುವುದಾಗಿ ನಂಬಿಸಿ ತಮ್ಮ ವಾಹನಗಳಲ್ಲಿ ಕೂಡಿಸಿಕೊಂಡು ಹೋಗುವ ಅನುಮಾಸ್ಪದ ವ್ಯಕ್ತಿಗಳು ತಿರುಗಾಡುವುದು ಕಂಡು ಬಂದಲ್ಲಿ ಪೊಲೀಸ ಠಾಣೆಗೆ ಮಾಹಿತಿ ನೀಡುವಂತೆ ಚಿಕ್ಕೋಡಿ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.