
ಬೆಳಗಾವಿ: ‘ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯ ನಿವಾರಣೆ ಆಗಬೇಕೆಂದರೆ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಬೇಕು ಎಂಬುದು ನಮ್ಮ ದೊಡ್ಡ ಕನಸಾಗಿತ್ತು. ಅಧಿವೇಶನ ನಡೆಯುತ್ತಿದೆ. ಆದರೆ, ಈ ಭಾಗದ ಕನಸುಗಳು ಕನಸಾಗಿಯೇ ಉಳಿದಿವೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಸುವರ್ಣ ವಿಧಾನಸೌಧವನ್ನು ಯಾವ ಉದ್ದೇಶಕ್ಕೆ ನಿರ್ಮಿಸಲಾಯಿತು ಮತ್ತು ಅದರ ದೂರದೃಷ್ಟಿ ಏನು ಎಂಬುದನ್ನೇ ಸರ್ಕಾರಗಳು ಮರೆತಿವೆ. ಕುಂಟುತ್ತ ಸಾಗಿದ್ದ ಈ ಭಾಗದ ಅಭಿವೃದ್ಧಿಗೆ ವೇಗ ನೀಡಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ನಿವಾರಿಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿತ್ತು. ಅದು ಈಡೇರಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಾನು, ಬಸವರಾಜ ಹೊರಟ್ಟಿ, ಎಂ.ಪಿ.ನಾಡಗೌಡ, ಎಂ.ಸಿ.ನಾಣಯ್ಯ, ಬಸವರಾಜ ಬೊಮ್ಮಾಯಿ ಜೊತೆಯಾಗಿ ಈ ಧ್ವನಿ ಎತ್ತಿದೆವು. ಬಿಜೆಪಿ– ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಅಧಿವೇಶನವನ್ನು ಬೆಳಗಾವಿಗೆ ತರುವಲ್ಲಿ ಯಶಸ್ವಿಯಾದೆವು. ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಕಾಲೇಜಿನಲ್ಲಿ 12 ದಿನಗಳ ಅಲ್ಪಾವಧಿಯಲ್ಲಿ ಮೊದಲ ಅಧಿವೇಶನ ಮಾಡಿದೆವು. ಐಎಎಸ್ ಅಧಿಕಾರಿ ಶಾಲಿನಿ ರಜನಿಶ್, ಶಾಸಕ ಅಭಯ ಪಾಟೀಲ ಮುಂತಾದವರು ಕೈ ಜೋಡಿಸಿ ಯಶಸ್ವಿಗೊಳಿಸಿದರು. 2009ರಲ್ಲಿ ಮತ್ತೊಮ್ಮೆ ಅಧಿವೇಶನ ಯಶಸ್ವಿಯಾಗಿ ಜರುಗಿತು. 2012ರಲ್ಲಿ ₹500 ಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನಸೌಧ ಕಟ್ಟಲಾಗಿದೆ. 13 ವರ್ಷವಾಗುತ್ತ ಬಂದರೂ ಅದನ್ನು ಕಟ್ಟಿದ ಉದ್ದೇಶಗಳು ಹಾಗೇ ಉಳಿದಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಸಚಿವ ಶಾಸಕರ ಇಚ್ಛಾಶಕ್ತಿ ಕೊರತೆ’
‘ಈ ಭಾಗದ ಜನಪ್ರತಿನಿಧಿಗಳಿಗೆ ಮಾತನಾಡಲು ಸಾಕ್ಷ್ಯಪೂರ್ಣ ಅವಕಾಶ ದೊರಕಲೇ ಇಲ್ಲ ಎಂಬ ದೂರು ಬಹಳ ಸಲ ಕೇಳಿಬಂದಿದೆ. ಗಂಭೀರ ವಿಚಾರ ಪಕ್ಕಕಿಟ್ಟು ಅಧಿವೇಶನವನ್ನು ತರಾತುರಿಯಲ್ಲಿ ಮುಗಿಸಲಾಗುತ್ತಿದೆ. ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ’ ಎಂದು ಪ್ರಭಾಕರ ಕೋರೆ ದೂರಿದ್ದಾರೆ. ‘ಉತ್ತರ ಕರ್ನಾಟಕದ ಜನ ಎದುರಿಸುತ್ತಿರುವ ಕೈಗಾರಿಕಾ ವಲಯಗಳ ಹಿನ್ನಡೆ ನೀರಾವರಿ ಯೋಜನೆಗಳು ಮೂಲಸೌಕರ್ಯದಲ್ಲಿ ಅಸಮತೋಲನ ಉದ್ಯೋಗಾವಕಾಶಗಳ ಅಭಾವ ಮುಂತಾದ ಪ್ರಮುಖ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಅಧಿವೇಶನದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಗಳು ಕಾಣಿಸುತ್ತಿಲ್ಲ. ಬೆಳಗಾವಿ ವಿಜಯಪುರ ಬಾಗಲಕೋಟೆ ರಾಯಚೂರು ಕಲಬುರಗಿ ಯಾದಗಿರಿ ಮತ್ತು ಬೀದರ್ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟು ರೈತರ ಸಂಕಷ್ಟಗಳು ಕೈಗಾರಿಕಾ ಹೂಡಿಕೆಯ ಕೊರತೆ ಮತ್ತು ಆರೋಗ್ಯ ಸೇವೆಗಳ ದುರ್ಬಲೀಕರಣ ಶೈಕ್ಷಣಿಕ ಹಿನ್ನಡೆಗಳು ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳು ಅಜೆಂಡಾದಲ್ಲಿದ್ದರೂ ಗಂಭೀರ ನಿರ್ಧಾರಗಳು ಆಗುತ್ತಿಲ್ಲ ಎಂಬುದು ದುರ್ದೈವದ ಸಂಗತಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.