ADVERTISEMENT

ಇನಾಮದಾರ ಕಾರ್ಖಾನೆ ದುರಂತ: ಯಾರದೋ ತಪ್ಪಿಗೆ ಉರಿದುಹೋದ ಬದುಕು

ಇನಾಮದಾರ ಕಾರ್ಖಾನೆ ದುರಂತದಲ್ಲಿ ಗಾಯಗೊಂಡಿದ್ದ ಎಂಟೂ ಮಂದಿ ಕಾರ್ಮಿಕರ ಸಾವು

ಸಂತೋಷ ಈ.ಚಿನಗುಡಿ
Published 9 ಜನವರಿ 2026, 8:08 IST
Last Updated 9 ಜನವರಿ 2026, 8:08 IST
   

ಬೆಳಗಾವಿ: ಕೆಲವೇ ದಿನಗಳಲ್ಲಿ ಅಪ್ಪ ಆಗುತ್ತೇನೆ ಎಂಬ ಹುಮ್ಮಸ್ಸಿನಲ್ಲಿದ್ದ ಒಬ್ಬ, ವಯಸ್ಸಾದ ಅಪ್ಪ– ಅವ್ವನಿಗೆ ಆಸರೆಯಾಗಿದ್ದ ಇನ್ನೊಬ್ಬ, ಮನ ಮೆಚ್ಚಿದ ಹುಡುಗಿಯ ಕೈ ಹಿಡಿದು ಹೊಸಬಾಳಿಗೆ ಕಾಲಿಡಲು ನಿಂತಿದ್ದ ಮತ್ತೊಬ್ಬ, ಬೆವರು ಹರಿಸಿ ಪುಟ್ಟದೊಂದು ಮನೆ ಕಟ್ಟಿಕೊಳ್ಳುವ ಕನಸಿನಲ್ಲಿದ್ದ ಮೊಗದೊಬ್ಬ... ಆ ಎಂಟೂ ಜನರದ್ದು ಒಂದೊಂದು ಕತೆ. ಬದುಕು ಕಟ್ಟಿಕೊಳ್ಳುವ ಭರದಲ್ಲಿ ಇನ್ಯಾರೋ ಮಾಡಿದ ತಪ್ಪಿಗೆ ಅವರ ಕನಸುಗಳು ಇದ್ದಿಲಾದವು, ದೇಹಗಳು ಬೂದಿಯಾದವು. ಕಬ್ಬು ನುರಿಸಿ ಸಿಹಿ ಕೊಡುತ್ತಿದ್ದವರ ಬಾಳೇ ಕಹಿಯಾಗಿ ಹೋಗಿದೆ.

ಬೈಲಹೊಂಗಲ ಸಮೀಪದ ಮರಕುಂಬಿ ಹದ್ದಿಯಲ್ಲಿರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ದುರಂತ ಎಂಟೂ ಮಂದಿಯನ್ನು ನುಂಗಿಹಾಕಿದೆ. ಕಾರ್ಖಾನೆಯಲ್ಲಿ ವಾಲ್ವ್‌ನ ದುರಸ್ತಿ ಮಾಡುವ ವೇಳೆ ಕುದಿಯುವ ಮಳ್ಳಿ ಕಾರ್ಮಿಕರ ಮೈಮೇಲೆ ಸುರಿದು, ಎಲ್ಲರೂ ಸುಟ್ಟುಹೋದರು.

ಆ ಘಟನೆ ಎಷ್ಟು ಭೀಕರವಾಗಿತ್ತೆಂದರೆ; ಎಂಟೂ ಜನರ ಚರ್ಮ ಶೇ 90ರಷ್ಟು ಸುಟ್ಟುಹೋಗಿತ್ತು. ದುರಂತದ ಬಳಿಕ ಕಾರ್ಖಾನೆ ಹೊರಭಾಗದಲ್ಲಿ ಕುಳಿತಿದ್ದ ಆ ಕಾರ್ಮಿಕರ ಕಣ್ಣಲ್ಲಿ ಇಡೀ ಬದುಕು ಮಿಂಚಿ ಮರೆಯಾದಂತೆ ಕಾಣಿಸಿತು. ತಮಗೆ ಏನಾಗುತ್ತದೆಯೋ ಏನೋ? ಬದುಕುತ್ತೇವೆಯೋ ಇಲ್ಲವೋ? ನಮ್ಮವರನ್ನು ಮತ್ತೆ ನೋಡುತ್ತೇವೆಯೋ ಇಲ್ಲವೋ ಎಂಬ ಆತಂಕದಲ್ಲೇ ಅವರು ಆಸ್ಪತ್ರೆ ಸೇರಿದರು. ದಿನ ಕಳೆಯುವುದರಲ್ಲಿ ನರಳಿ– ನರಳಿ ಪ್ರಾಣ ಬಿಟ್ಟರು.

ADVERTISEMENT

ಈಡೇರಲಿಲ್ಲ ಕಂದಮ್ಮನ ಕಾನುವ ಕನಸು: ಮಂಜುನಾಥ ಗೋಪಾಲ ತೇರದಾಳ ಅವರು ಕಾರ್ಖಾನೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ತುಂಬು ಗರ್ಭಿಣಿ. ಇದೇ ವಾರದಲ್ಲಿ ಪತ್ನಿಗೆ ಹೆರಿಗೆ ದಿನ ಕೂಡ ನೀಡಲಾಗಿದೆ. ತಂದೆ ಆಗುವ ಕನಸು ಕಂಡಿದ್ದ ಮಂಜುನಾಥ ಲೋಕವನ್ನೇ ತ್ಯಜಿಸಿದ್ದಾರೆ. ಇನ್ನೂ ಭೂಮಿಗೆ ಬಾರದ ಕಂದಮ್ಮ ಗರ್ಭದಲ್ಲೇ ಅನಾಥವಾಗಿದೆ. ಇತ್ತ ಇದ್ದೊಬ್ಬ ಮಗನ ಕಳೆದುಕೊಂಡ ಅವರ ತಂದೆ– ತಾಯಿಗೆ ದಿಕ್ಕೇ ತೋಚದಾಗಿದೆ.

ಎದೆ ಎತ್ತರಕ್ಕೆ ಬೆಳೆದ ಮಗನಿಗೆ ಮದುವೆ ಮಾಡುವ ಉಮೇದಿನಲ್ಲಿದ್ದರು ಭರತ್ ಸಾರವಾಡಿ ಅವರ ತಂದೆ ಬಸಪ್ಪ‌. ಇವರ ಇಬ್ಬರೂ ಪುತ್ರರು ಕಾರ್ಖಾನೆಯಲ್ಲಿ ಕಾರ್ಮಿಕರು. ಇಬ್ಬರಿಗೂ ಮದುವೆ ಮಾಡಲೆಂದು ಕನ್ಯಾನ್ವೇಷಣೆ ನಡೆಸಿದ್ದರು. ಮಾರ್ಚ್‌ ವೇಳೆಗೆ ಹಸೆಮಣೆ ಏರಬೇಕಿದ್ದ ಯುವಕ ಈಗ ಮಸಣ ಸೇರಿದ್ದಾನೆ.

ಐಟಿಐ‌ ಓದಿದ ಮಂಜುನಾಥ ಕಾಜಗಾರ್ ಕಾರ್ಖಾನೆಯಲ್ಲಿ ಹೆಲ್ಪರ್ ಆಗಿದ್ದರು. 28 ವರ್ಷ ವಯಸ್ಸಿನ ಆ ಯುವಕ ಪುಟ್ಟದೊಂದು ಮನೆ ಕಟ್ಟಸಬೇಕು, ಹೆತ್ತವರಿಗೆ ಆಸರೆ ಆಗಬೇಕು, ನಂತರ ಮದುವೆ ಮಾಡಿಕೊಳ್ಳಬೇಕು ಎಂಬ ಕನಸು ಕಂಡಿದ್ದ. ಸುಟ್ಟುಹೋದ ಮಗನ ಶವದ ಜತೆಗೆ ಅವರ ಕನಸುಗಳೂ ಕರಕಲಾದವು. ಕೆಎಲ್‌ಇ ಆಸ್ಪತ್ರೆಯ ಶವಾಗಾರದ ಮುಂದೆ ಹೆತ್ತವರು, ಬಂಧುಗಳ ಆಕ್ರಂದನ ಹೇಳತೀರದಾಯಿತು.

ರಾಘವೇಂದ್ರ ಮಲ್ಲಪ್ಪ ಗಿರಿಯಾಳ ಕಳೆದ 20 ವರ್ಷಗಳಿಂದ ಬೇರೊಂದು ಕಾರ್ಖಾನೆಯಲ್ಲಿ ಟೆಕ್ನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಸಂಬಳ ಸಿಗುತ್ತದೆ. ಒಂದು ಸೂರು ಕಟ್ಟಿಸಿಕೊಳ್ಳಬೇಕು ಎಂಬ ಹಂಬಲಕ್ಕಾಗಿ ಹಳೆಯ ಕೆಲಸ ಬಿಟ್ಟು ವರ್ಷದ ಹಿಂದಷ್ಟೇ ಇನಾಮದಾರ ಕಾರ್ಖಾನೆ ಸೇರಿಕೊಂಡಿದ್ದರು. ಆದರೆ, ಯಾರೋ ಮಾಡಿದ ತಪ್ಪಿಗೆ ಅವರ ಬದುಕೇ ಕಮರಿ ಹೋಗಿದೆ.

ಮಾಲೀಕರ ಹೆಸರೇ ಹೇಳದ ಪೊಲೀಸರು

ಅವಘಡ ಸಂಭವಿಸಿದ ಎರಡು ದಿನಗಳಾದರೂ ಕಾರ್ಖಾನೆಯ ಮಾಲೀಕರು ಅಥವಾ ಆಡಳಿತ ಮಂಡಳಿಯವರು ಸ್ಥಳಕ್ಕೆ ಬಂದಿಲ್ಲ. ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವ ಸೌಜನ್ಯ ತೋರಿಸಿಲ್ಲ ಎಂದು ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಕಾರ್ಖಾನೆಗೆ ಯಾರು ಯಾರು ಮಾಲೀಕರಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪೊಲೀಸರು ಸ್ಪಷ್ಟ ಉತ್ತರ ನೀಡಲು ತಯಾರಿಲ್ಲ. ‘ಮಾಲೀಕರನ್ನು ‍ಗುರುತಿಸಿ ದುರಂತದಲ್ಲಿ ಅವರ ನಿರ್ಲಕ್ಷ್ಯ ಏನೆಂದು ಪರಿಶೀಲಿಸಲಾಗುವುದು. ಸದ್ಯಕ್ಕೆ ಮೂವರು ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಎಸ್‌ಪಿ ಕೆ.ರಾಮರಾಜನ್‌ ಪ್ರತಿಕ್ರಿಯಿಸಿದ್ದಾರೆ.

ಮೃತಪಟ್ಟವರು...

ಬೈಲಹೊಂಗಲ ತಾಲ್ಲೂಕಿನ ನೇಸರಗಿ ಗ್ರಾಮದ ದೀಪಕ‌ ಮುನವಳ್ಳಿ (31) ಅರವಳ್ಳಿ ಗ್ರಾಮದ ಮಂಜುನಾಥ ಮಡಿವಾಳಪ್ಪ ಕಾಜಗಾರ್ (28) ಖಾನಾಪುರ ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಸುದರ್ಶನ ಬನೋಶಿ (25) ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ್ ಬಸಪ್ಪ ಸಾರವಾಡಿ (27) ಗಿಳಿಹೊಸೂರ ಗ್ರಾಮದ ರಾಘವೇಂದ್ರ ಮಲ್ಲಪ್ಪ ಗಿರಿಯಾಳ (36) ಅಥಣಿ ತಾಲ್ಲೂಕಿನ ಹೂಲಿಕಟ್ಟಿ ಮಂಜುನಾಥ ಗೋಪಾಲ ತೇರದಾಳ (31) ಬಾಗಲಕೋಟೆ ಮರೆಗುದ್ದಿ ಗ್ರಾಮದ ಗುರುನಾಥ ಭೀರಪ್ಪ ತಮ್ಮಣ್ಣವರ (38) ಬಾಗಲಕೋಟೆ ಜಿಲ್ಲೆಯ ರಬಕವಿ– ಬನಹಟ್ಟಿಯ ಅಕ್ಷಯ್ ಸುಭಾಷ ಚೋಪಡೆ(48).

ಬಾರಿಸಿದೆ ಎಚ್ಚರಿಕೆ ಗಂಟೆ

ಜಿಲ್ಲೆಯಲ್ಲಿ 31 ಸಕ್ಕರೆ ಕಾರ್ಖಾನೆಗಳಿವೆ. ಅವುಗಳಲ್ಲಿ ಈ ವರ್ಷ 29 ಕಾರ್ಖಾನೆಗಳಲ್ಲಿ ಹಂಗಾಮು ಆರಂಭವಾಗಿದೆ. ಆದರೆ ಬಹುಪಾಲು ಕಡೆ ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳೇ ಇಲ್ಲ ಎಂಬುದು ಕಾರ್ಮಿಕರ ಆರೋಪ. ಇನಾಮದಾರ ಕಾರ್ಖಾನೆಯಲ್ಲಿ ನಡೆದ ದುರಂತಕ್ಕೂ ಸುರಕ್ಷತಾ ಕ್ರಮದ ಲೋಪವೇ ಕಾರಣ ಎಂದು ಎಸ್ಪಿ ಕೆ.ರಾಮರಾಜನ್‌ ತಿಳಿಸಿದ್ದಾರೆ. ಮಾತ್ರವಲ್ಲ; ಎಲ್ಲ ಕಾರ್ಖಾನೆಗಳಲ್ಲೂ ಸುರಕ್ಷತಾ ಕ್ರಮ ವಹಿಸುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ನೂರಾರು ಕೋಟಿಯ ವ್ಯವಹಾರ ಮಾಡುವ ಕಾರ್ಖಾನೆಗಳ ಮಾಲೀಕರು ಮಾತ್ರ ಬಡ ಕಾರ್ಮಿಕರ ಬದುಕಿಗೆ ಬೆಲೆ ಕೊಡುತ್ತಿಲ್ಲ ಎಂಬುದು ಅವರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.