
ಬೈಲಹೊಂಗಲ: ಸಮೀಪದ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಾವನ್ನಪ್ಪಿದ ಮೃತ ಬಡ ಕಾರ್ಮಿಕರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮೃತ ಕಾರ್ಮಿಕ ಕುಟುಂಬಸ್ಥರು, ಗ್ರಾಮಸ್ಥರು, ರೈತಪರ ಹೋರಾಟಗಾರರು ರಸ್ತೆ ತಡೆ ನಡೆಸಿ ಗುರುವಾರ ತೀವ್ರ ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ತಾಲ್ಲೂಕಿನ ಅರವಳ್ಳಿ ಗ್ರಾಮದ ಮೃತ ಕಾರ್ಮಿಕ ಮಂಜುನಾಥ ಮಡಿವಾಳಪ್ಪ ಕಾಜಗಾರ್ ಅವರ ಶವವನ್ನು ನಗರದ ಚನ್ನಮ್ಮ ವೃತ್ತದಲ್ಲಿಟ್ಟು ಆಕ್ರೋಶ ಹೊರಹಾಕಿದರು.
ಬಡ ಕಾರ್ಮಿಕರ ಸಾವಿಗೆ ಕಾರ್ಖಾನೆ ಮಾಲೀಕರು, ಆಡಳಿತ ಮಂಡಳಿ ಸದಸ್ಯರೇ ನೇರ ಹೊಣೆಗಾರರು ಎಂದು ದೂರಿದರು. ಬಡ ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ದುರಂತ ಸಾವಿಗೀಡಾಗಿದರೂ ಕಾರ್ಖಾನೆ ಮಾಲೀಕರು, ವ್ಯವಸ್ಥಾಪಕರು, ಆಡಳಿತ ಮಂಡಳಿ ಸದಸ್ಯರು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಆಕ್ರೋಶ ಹೊರ ಹಾಕಿದರು.
ಮೃತ ಕಾರ್ಮಿಕ ಮಂಜುನಾಥ ಕಾಜಗಾರ್ ತಂದೆ ಮಡಿವಾಳಪ್ಪ ಮಾತನಾಡಿ, ‘ನನ್ನ ಮಗನ ಸಾವಿಗೆ ಕಾರ್ಖಾನೆಯವರೇ ನೇರ ಹೊಣೆ. ಇನ್ನೂ ನಮಗೆ ಯಾರೂ ಗತಿ ಇಲ್ಲದಂತಾಗಿದೆ’ ಎಂದು ಕಣ್ಣಿರು ಹಾಕಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾರ್ಖಾನೆ ವ್ಯವಸ್ಥಾಪಕ ರವೀಂದ್ರ ಪಟ್ಟಣಶೆಟ್ಟಿ ಅವರಿಗೆ ಘೇರಾವ್ ಹಾಕಿದರು.
ರೈತರನ್ನುದ್ದೇಶಿಸಿ ಪಟ್ಟಣಶೆಟ್ಟಿ ಮಾತನಾಡಿ, ‘ಮೃತ ಕಾರ್ಮಿಕರ ಸಾವಿನ ಸುದ್ದಿ ತಿಳಿದು ತುಂಬ ನೋವಾಗಿದೆ. ಮೃತರ ಕುಟುಂಬಗಳಿಗೆ ಆಡಳಿತ ಮಂಡಳಿಯಿಂದ ತಲಾ ₹15 ಲಕ್ಷ ಪರಿಹಾರ ನೀಡುವುದಾಗಿ ಮಾತುಕತೆ ಆಗಿದೆ’ ಎಂದು ತಿಳಿಸಿದರು. ಇದಕ್ಕೆ ಪ್ರತಿಭಟನಕಾರರು ಒಪ್ಪದೇ ₹1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ತಹಶೀಲ್ದಾರ್ ಹನುಮಂತ ಶೀರಹಟ್ಟಿ ಭೇಟಿ ನೀಡಿ ಪ್ರತಿಭಟನಕಾರರ ಮನವೋಲಿಸಲು ಪ್ರಯತ್ನಿಸಿದರು. ಅದಕ್ಕೂ ಪಟ್ಟು ಸಡಿಸದೆ ಹೋರಾಟ ಮುಂದುವರಿಸಿದರು. ಡಿವೈಎಸ್‌ಪಿ ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಪ್ರಮೋದ ಯಲಿಗಾರ, ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಎಫ್.ವೈ.ಮಲ್ಲೂರ, ಗುರುರಾಜ ಕಲಬುರಗಿ, ಪ್ರವೀಣ ಗಂಗೊಳ್ಳ, ಸುಮಾ ನಾಯಕ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
Cut-off box - ₹20 ಲಕ್ಷ ಪರಿಹಾರ ಘೋಷಣೆ ಹೋರಾಟ ಸ್ಥಳಕ್ಕೆ ಬಂದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಟಣಶೆಟ್ಟಿ ಮಾತನಾಡಿ ‘ಮೃತರ ಕುಟುಂಬಕ್ಕೆ ತಾತ್ಕಾಲಿಕವಾಗಿ ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಆಗ ಹೋರಾಟಗಾರರು ಪ್ರತಿಭಟನೆ ನಿಲ್ಲಿಸಿ ಹೋರಾಟ ಸ್ಥಳದಿಂದ ಶವವನ್ನು ಅರವಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.