ಬೆಳಗಾವಿ: ಹಲವು ತೊಡಕುಗಳ ಮಧ್ಯೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಬೆಳಗಾವಿಯಲ್ಲಿ ಸಮೀಕ್ಷೆಗಾಗಿ 12 ಲಕ್ಷ ಕುಟುಂಬ ಗುರುತಿಸಲಾಗಿದೆ. ಸೆ.22ರಂದು ಆರಂಭವಾದ ಸಮೀಕ್ಷೆ ಅ.7ರಂದು ಮುಕ್ತಾಯವಾಗಲಿದೆ. ಗುರಿ ಸಾಧನೆಗೆ ನಿತ್ಯ 75 ಸಾವಿರ ಕುಟುಂಬಗಳ ಸಮೀಕ್ಷೆ ಮಾಡಬೇಕಿದೆ.
ಆದರೆ, ಶನಿವಾರ ಸಂಜೆಯವರೆಗೆ 95 ಸಾವಿರ ಕುಟುಂಬಗಳ ಸಮೀಕ್ಷೆಯಷ್ಟೇ ಮುಗಿದಿದೆ. ಅಂದರೆ ಕಳೆದ ಆರು ದಿನಗಳಲ್ಲಿ ಶೇ 8ರಷ್ಟು ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಬಾಕಿ ಉಳಿದ 10 ದಿನಗಳಲ್ಲಿ 11 ಲಕ್ಷ ಕುಟುಂಬಗಳ ಸಮೀಕ್ಷೆಯನ್ನು ಸಮೀಕ್ಷಕರು ಮಾಡಬೇಕಿದೆ.
ಆರಂಭದಲ್ಲಿ 10,803 ಸಮೀಕ್ಷಕರನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ, ಗರ್ಭಿಣಿಯರು, ತೀವ್ರ ತರಹದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಸೇವಾನಿವೃತ್ತಿ ಅಂಚಿನಲ್ಲಿ ಇರುವವರಿಗೆ ಈ ಕೆಲಸದಿಂದ ವಿನಾಯಿತಿ ನೀಡಬೇಕೆಂದು ಶಿಕ್ಷಕರು ತಕರಾರು ತೆಗೆದರು. ಹಾಗಾಗಿ ಸಮೀಕ್ಷಕರ ಪಟ್ಟಿ ಪರಿಷ್ಕರಿಸಿ, ಈಗ 9,895 ಸಮೀಕ್ಷಕರನ್ನು ಉಳಿಸಿಕೊಳ್ಳಲಾಗಿದೆ.
ನಾನಾ ಸಮಸ್ಯೆ:
‘ಆಗಾಗ ಸರ್ವರ್ ಕೈಕೊಡುತ್ತಿದೆ. ತಾಂತ್ರಿಕ ದೋಷ ಎದುರಾದಾಗ, ಅದನ್ನು ಸರಿಪಡಿಸಲು ಯಾರೂ ತ್ವರಿತವಾಗಿ ಸ್ಪಂದಿಸುತ್ತಿಲ್ಲ. ಸಮೀಕ್ಷೆಗಾಗಿ ತೆರಳಲು ರೂಪಿಸಿದ ಆ್ಯಪ್‌ನಲ್ಲಿ ಸರಿಯಾಗಿ ಲೋಕೇಷನ್ ತೋರಿಸುತ್ತಿಲ್ಲ. ಇದರಿಂದ ಸಮೀಕ್ಷೆಗೆ ಒಳಪಡಬೇಕಿರುವವರ ಮನೆಗೆ ಹೋಗಲು ತೊಂದರೆಯಾಗುತ್ತಿದೆ’ ಎಂದು ವಡಗಾವಿಯ ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕಿಯೊಬ್ಬರು ದೂರಿದರು.
‘ನಮಗೆ ಸಮೀಕ್ಷೆ ಕೆಲಸದೊಂದಿಗೆ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕೆಲಸವನ್ನೂ ನೀಡಲಾಗಿದೆ. ಒಂದೆಡೆ ಬೇಗ ಸಮೀಕ್ಷೆ ಮಾಡಿ ಎನ್ನುತ್ತಾರೆ. ಮತ್ತೊಂದೆಡೆ ಎರಡೇ ದಿನಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿ ಎಂದು ತಿಳಿಸುತ್ತಾರೆ. ಏಕಕಾಲಕ್ಕೆ ಎರಡೂ ಕೆಲಸ ಮಾಡಲಾಗದೆ ಒದ್ದಾಡುತ್ತಿದ್ದೇವೆ’ ಎಂದು ರಾಮದುರ್ಗ ತಾಲ್ಲೂಕಿನ ಹುಲಕುಂದ ವಲಯದ ಶಿಕ್ಷಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
‘ಸಮೀಕ್ಷೆ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಇನ್ನೂ ಸರಿಯಾಗಿ ಮಾಹಿತಿ ತಲುಪಿಲ್ಲ. ನಾವು ಸಮೀಕ್ಷೆಗೆ ಕುಟುಂಬದವರು ಮತದಾರರ ಗುರುತಿನ ನೀಟಿ, ಆಧಾರ್ ಗುರುತಿನ ಚೀಟಿ ಮತ್ತಿತರ ದಾಖಲೆ ಹುಡುಕಾಡುತ್ತಿದ್ದಾರೆ. ಕೆಲವೊಮ್ಮೆ ದಾಖಲೆ ಸಿಗದೆ ಸಮೀಕ್ಷೆಯೇ ಪೂರ್ಣಗೊಳ್ಳುತ್ತಿಲ್ಲ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.