ಬೈಲಹೊಂಗಲ: ಪಟ್ಟಣದ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ಶಾಂತವ್ವಾ ಮರಿಗೌಡರ ಅವರನ್ನು ನೇಮಕ ಮಾಡಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶ ನೀಡಿದರೂ ನಿರ್ಗಮಿತ ನಿಯೋಜನಾಧಿಕಾರಿ ಮಂಜುನಾಥ ಕರಿಸಿರಿ ಅಧಿಕಾರ ಹಸ್ತಾಂತರ ಮಾಡಿಲ್ಲ.
ಗುರುವಾರ ಶಾಂತವ್ವಾ ಅವರು ಕಚೇರಿಗೆ ಬಂದರೂ ರಜಿಸ್ಟರ್ ಪುಸ್ತಕ ಲಭ್ಯವಿಲ್ಲದ ಕಾರಣ ಅಧಿಕಾರ ವಹಿಸಿಕೊಳ್ಳಲಾಗದೇ, ಕಚೇರಿ ಆವರಣದಲ್ಲಿ ಕುಳಿತಿದ್ದರು.
ಎರಡನೇ ದಿನವಾದ ಶುಕ್ರವಾರವೂ ಅವರು ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯ ಒಳಾಂಗಣದಲ್ಲಿ ಕರಸಿರಿ ಅವರಿಗಾಗಿ ಕಾದು ಕುಳಿತಿದ್ದರು. ಆದರೆ ಕರಸಿರಿ ಹಾಜರಾಗಲಿಲ್ಲ.
ಕಲ್ಯಾಣಾಧಿಕಾರಿಗಳ ಕೊಠಡಿಗೆ ಬೀಗ ಹಾಕಲಾಗಿದೆ ಎಂದು ಶಾಂತವ್ವಾ ಆಪಾದಿಸಿದರು.
‘ವರ್ಗಾವಣೆ ಆದೇಶದ ವಿಚಾರ ನನ್ನ ಗಮನಕ್ಕೆ ಇರಲಿಲ್ಲ. ಇದ್ದರೆ ಅಲ್ಲಿಯೇ ಇದ್ದು, ನ್ಯಾಯಾಲಯದ ಆದೇಶದಂತೆ ಅಧಿಕಾರ ಹಸ್ತಾಂತರ ಮಾಡುತ್ತಿದ್ದೆ. ನನ್ನ ಸಂಬಂಧಿಕರಿಗೆ ಅನಾರೋಗ್ಯವಾಗಿದ್ದರಿಂದ ಬೆಂಗಳೂರಿನಲ್ಲಿದ್ದೆ. ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ಇಲ್ಲಿನ ನಮ್ಮ ಮುಖ್ಯ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದೇನೆ. ಶನಿವಾರ ಬಂದು ಅಧಿಕಾರ ಹಸ್ತಾಂತರಿಸುವೆ’ ಎಂದು ಕರಿಸಿರಿ ಅವರು ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಕರೆಗೆ ಉತ್ತರಿಸಿದ್ದ ಕರಸಿರಿ, ‘ಶುಕ್ರವಾರ ಬಂದು ಅಧಿಕಾರ ಹಸ್ತಾಂತರಿಸುವೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.