ADVERTISEMENT

ಬೆಳಗಾವಿ| ₹200 ಕೋಟಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಕೆ: ಲೋಕಾಯುಕ್ತಕ್ಕೆ ದೂರು

ನಕಲಿ ದಾಖಲೆ ಸೃಷ್ಟಿಸಿ 5.34 ಎಕರೆ ಜಮೀನು ಖಾಸಗಿಯವರ ಪಾಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 15:44 IST
Last Updated 25 ಫೆಬ್ರುವರಿ 2026, 15:44 IST
<div class="paragraphs"><p>ಭೀಮಪ್ಪ ಗಡಾದ</p></div>

ಭೀಮಪ್ಪ ಗಡಾದ

   

ಬೆಳಗಾವಿ: ‘ಇಲ್ಲಿನ ಶ್ರೀನಗರ ಉದ್ಯಾನ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ಕಾರಕ್ಕೆ ಸೇರಿದ ಸರ್ವೆ ನಂ. 1316/3ರಲ್ಲಿ 5 ಎಕರೆ 34 ಗುಂಟೆ ಜಮೀನಿನ ದಾಖಲೆಗಳನ್ನು ತಿರುಚಿ, ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ದಾಖಲಿಸಲಾಗಿದೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರ ಭೀಮಪ್ಪ ಗಡಾದ ಲೋಕಾಯುಕ್ತ ನ್ಯಾಯಾಧೀಶ ಬಿ.ಎಸ್‌.ಪಾಟೀಲ ಅವರಿಗೆ ಬುಧವಾರ ದೂರು ನೀಡಿದ್ದಾರೆ.

ಸರ್ಕಾರಿ ಭೂಮಿ ಕಬಳಿಸಿದವರು, ಅದಕ್ಕೆ ಕಾರಣವಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಈ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಭೂ ಮಾಪನ ಇಲಾಖೆ, ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಕೇಳಿದ್ದೇನೆ. ದಾಖಲೆಗಳು ಲಭ್ಯವಿಲ್ಲ ಅಥವಾ ಕಾಣೆಯಾಗಿವೆ ಎಂಬ ಉತ್ತರ ಅನುಮಾನಕ್ಕೆ ಕಾರಣವಾಗಿದೆ. ರಾಜಕಾರಣಿಗಳು ಹಾಗೂ ಭೂಗಳ್ಳರ ಪ್ರಭಾವದಿಂದ ಕೆಲ ಅಧಿಕಾರಿಗಳು ಈ ಜಮೀನಿನ ಚಲನ– ವಲನಗಳ ಮೇಲೆ ನಿಗಾವಹಿಸುತ್ತಿದ್ದಾರೆ’ ಎಂದೂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

‘1964–65ರಿಂದ 1975–76ರವರೆಗೆ ಪಹಣಿ ದಾಖಲೆಗಳಲ್ಲಿ ಈ ಜಮೀನು ‘ಪೊಲೀಸ್‌ ಗೋಲಿಬಾರ ಕಡೆ’ ಎಂದು ದಾಖಲಾಗಿದೆ. ಅಂದರೆ ಇದು ಸರ್ಕಾರದ ಆಸ್ತಿ ಎಂದರ್ಥ. ಆದರೆ, 1975–76ರಲ್ಲಿ ಹಕ್ಕು ದಾಖಲೆ ಸಂಖ್ಯೆ 6907 ಆಧಾರವಾಗಿ 17 ಹಿಸ್ಸಾಗಳಾಗಿ ವಿಂಗಡಿಸಿ ಖಾಸಗಿ ವ್ಯಕ್ತಿಗಳ ಹೆಸರನ್ನು ಸೇರಿಸಲಾಗಿದೆ. ಈ ಹಕ್ಕು ದಾಖಲೆ ಸಂಖ್ಯೆ 6907 ರಿ.ಸ.ನಂ. 1316/3ಗೆ ಸಂಬಂಧಿಸದೇ ಬೇರೆ ಸರ್ವೆ ಸಂಖ್ಯೆಗೆ ಸಂಬಂಧಿಸಿದೆ ಎಂದು ಮಾಹಿತಿ ಹಕ್ಕಿನಡಿ ಈಗಾಗಲೇ ತಹಶೀಲ್ದಾರರು ಸ್ಪಷ್ಟಪಡಿಸಿದ್ದಾರೆ. ಇವೆಲ್ಲವುಗಳ ಆಧಾರದ ಮೇಲೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 2024ರ ಆಗಸ್ಟ್‌ನಲ್ಲಿ ಈ ಜಮೀನನ್ನು ‘ಕರ್ನಾಟಕ ಸರ್ಕಾರ’ ಎಂಬ ಹೆಸರಿನಲ್ಲಿ ದಾಖಲಿಸಲು ಸೂಚಿಸಿದ್ದಾರೆ. ಅಲ್ಲದೇ, 2025ರ ಜನವರಿಯಲ್ಲಿ ಆಗಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ‘ಈ ಜಾಗೆ ಪೊಲೀಸ್ ಇಲಾಖೆಯ ಆಸ್ತಿಯಾಗಿದ್ದು, 1924ರಿಂದಲೂ ಪೊಲೀಸ್‌ ಗೋಲಿಬಾರ್‌ ಕಡೆ ಆಗಿದೆ’ ಎಂದು ದೃಢಪಡಿಸಿದ್ದಾರೆ. ಈ ಎಲ್ಲ ದಾಖಲೆಗಳನ್ನೂ ದೂರಿನೊಂದಿಗೆ ಸಲ್ಲಿಸಲಾಗಿದೆ.

‘ಇದೇ ವಿಷಯವಾಗಿ ಜಿಲ್ಲಾಧಿಕಾರಿಗೆ 2025 ಮತ್ತು 2026ರಲ್ಲಿ ದಾಖಲೆಗಳ ಸಮೇತ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಜಮೀನು ಸದ್ಯ ₹200 ಕೋಟಿ ಬೆಲೆಬಾಳುತ್ತದೆ. ಸರ್ಕಾರಿ ಜಮೀನನ್ನು ಕಬಳಿಸಲು ಯತ್ನಿಸಿರುವ ಅಧಿಕಾರಿಗಳು ಮತ್ತು ಭೂಗಳ್ಳರ ವಿರುದ್ಧ ಸಮಗ್ರ ತನಿಖೆ ನಡೆಸಿ, ಜಮೀನನ್ನು ಪುನಃ ‘ಪೊಲೀಸ್‌ ಗೋಲಿಬಾರ್‌ ಕಡೆ’ ಎಂದು ನಮೂದಿಸಲು ಕ್ರಮ ಕೈಗೊಳ್ಳಿ’ ಎಂದೂ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.