ADVERTISEMENT

ಬಯಲು ಶೌಚ ಮುಕ್ತ ನಗರ: ಘೋಷಣೆ

ಶೌಚಾಲಯ ನಿರ್ಮಾಣದಲ್ಲಿ ಶೇ 95ಕ್ಕಿಂತಲೂ ಹೆಚ್ಚಿನ ಸಾಧನೆ ಪರಿಗಣನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 12:28 IST
Last Updated 2 ನವೆಂಬರ್ 2018, 12:28 IST
ಬೆಳಗಾವಿ ಪಾಲಿಕೆಗೆ ದೊರೆತಿರುವ ಪ್ರಮಾಣಪತ್ರ
ಬೆಳಗಾವಿ ಪಾಲಿಕೆಗೆ ದೊರೆತಿರುವ ಪ್ರಮಾಣಪತ್ರ   

ಬೆಳಗಾವಿ: ನಗರವನ್ನು ‘ಬಯಲು ಶೌಚ ಮುಕ್ತ’ವೆಂದು ಘೋಷಿಸಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛತಾ ಪ್ರಮಾಣಪತ್ರ ನೀಡಿದೆ ಎಂದು ನಗರಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

‘ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಮೌಲ್ಯಾಂಕನ ಏಜೆನ್ಸಿಯಾದ ಭಾರತೀಯ ನಿಯಂತ್ರಣ ಪರಿಷತ್ತು (ಕ್ಯೂಸಿಐ) ಸೆ. 22ರಿಂದ ಅನ್ವಯವಾಗುವಂತೆ ಈ ಪ್ರಮಾಣಪತ್ರ ನೀಡಿದೆ. ಇದಕ್ಕೆ ಆರು ತಿಂಗಳವರೆಗೆ ಮಾನ್ಯತೆ ಇರುತ್ತದೆ. ನಂತರ, ಆ ಏಜೆನ್ಸಿಯವರು ಮತ್ತೊಮ್ಮೆ ಪರಿಶೀಲನೆ ನಡೆಸುತ್ತಾರೆ. ಸದ್ಯಕ್ಕೆ ನಗರಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶವನ್ನೂ ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಅದನ್ನು ಉಳಿಸಿಕೊಂಡು ಹೋಗಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ನಗರದಲ್ಲಿ 58 ವಾರ್ಡ್‌ಗಳಿದ್ದು, 2011ರ ಜನಗಣತಿ ಪ್ರಕಾರ 1.23 ಲಕ್ಷ ಮನೆಗಳಿವೆ. ಬಹುತೇಕ ಎಲ್ಲ ಕುಟುಂಬಗಳೂ ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ನಗರಪಾಲಿಕೆಯಿಂದ ನೀಡಲಾಗುವ ₹ 15ಸಾವಿರ ಪ್ರೋತ್ಸಾಹಧನ ಕೋರಿ 2,031 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳನ್ನು ಪರಿಶೀಲಿಸಿ, 1900 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ 1,700 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಾಗದ ಕೊರತೆ ಇರುವುದರಿಂದ 200 ಶೌಚಾಲಯಗಳ ನಿರ್ಮಾಣವಷ್ಟೇ ಬಾಕಿ ಇದೆ. ಆದರೆ, ಅ ಕುಟುಂಬಗಳು ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಿವೆ. ಹೀಗಾಗಿ, ಏಜೆನ್ಸಿಯು ಘೋಷಣೆಗೆ ಪರಿಗಣಿಸಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಬಳಸುತ್ತಾರೆ: ‘ನಗರದಲ್ಲಿ 36 ಸಮುದಾಯ ಶೌಚಾಲಯ, 21 ಸಾರ್ವಜನಿಕ ಶೌಚಾಲಯಗಳಿವೆ. ಖಾಸಗಿ ಕಚೇರಿಗಳು, ವಾಣಿಜ್ಯ ಮಳಿಗೆಗಳು, ಬ್ಯಾಂಕ್‌ಗಳು, ಮಾಲ್‌ಗಳು ತಮ್ಮದೇ ಆದ ಶೌಚಾಲಯಗಳನ್ನು ಹೊಂದಿವೆ. ಪಾಲಿಕೆ ವ್ಯಾಪ್ತಿಯಲ್ಲಿರುವ 26 ಪೆಟ್ರೋಲ್ ಬಂಕ್‌ಗಳ ಶೌಚಾಲಯಗಳನ್ನು ಕೂಡ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸೂಚಿಸಲಾಗಿದೆ. ಶೇ 95ಕ್ಕಿಂತಲೂ ಹೆಚ್ಚಿನ ಕುಟುಂಬಗಳು ಶೌಚಾಲಯ ಹೊಂದಿರುವುದನ್ನು ಆಧರಿಸಿ ಪ್ರಮಾಣಪತ್ರ ನೀಡಲಾಗಿದೆ’ ಎಂದು ವಿವರಿಸಿದರು.

‘ಕೆಲವು ಕೊಳೆಗೇರಿಗಳಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇತ್ತು. ಹೀಗಾಗಿ, ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅವುಗಳನ್ನು ಬಳಸುವಂತೆ ಮನವರಿಕೆ ಮಾಡಿಕೊಡುವುದು ಹಾಗೂ ಮನಸ್ಥಿತಿ ಬದಲಾವಣೆಗೆ ಪೂರಕವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.