ADVERTISEMENT

ಹೂಲಿಕಟ್ಟಿ ಘಟನೆ: ಆರೋಪಿತರ ಬಂಧನಕ್ಕೆ ಶಾಸಕ ವೈದ್ಯ ಸೂಚನೆ 

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 2:22 IST
Last Updated 24 ಜುಲೈ 2025, 2:22 IST
23-ಸವದತ್ತಿ-01: ಕೆಡಿಪಿ ಸಭೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.
23-ಸವದತ್ತಿ-01: ಕೆಡಿಪಿ ಸಭೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.   

ಸವದತ್ತಿ: ಹೂಲಿಕಟ್ಟಿಯ ನೀರಿನ ಟ್ಯಾಂಕಿಗೆ ವಿಷ ಬೆರಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಶಾಸಕ ವಿಶ್ವಾಸ್ ವೈದ್ಯ ಅವರು ಪೊಲೀಸ್‌ ಇನ್‌ಸ್ಪೆಕ್ಟರ್‌ ಧರ್ಮಾಕರ ಧರ್ಮಟ್ಟಿ ಅವರಿಗೆ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಅಹಿತಕರ ಘಟನೆ ಜರುಗದಂತೆ ಎಚ್ಚರವಹಿಸಲು ಸಿಸಿ ಕ್ಯಾಮೆರಾ ಅಳವಡಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಿಸಬೇಕು ಎಂದು ಸೂಚಿಸಿದ ಶಾಸಕರು, ಇಲಾಖೆಯ ಸಮಸ್ಯೆಗಳ ಕುರಿತು ತಿಳಿಸಲು ಬಿಇಓ ಮೋಹನ ದಂಡಿನ್ ಅವರಿಗೆ ಆದೇಶಿಸಿದರು.

ADVERTISEMENT

ಯಕ್ಕೇರಿ-ಗೊರಬಾಳ ರಸ್ತೆಯಲ್ಲಿನ ಶಾಲೆಗೆ ಕಲುಷಿತ ನೀರು ಸರಬರಾಜಾಗುತ್ತಿದೆ. ಸರಿಪಡಿಸಿ ಮಕ್ಕಳಿಗೆ ಗುಣಮಟ್ಟದ ನೀರು ಪೂರೈಸಬೇಕು. ಜೆಜೆಎಂನಲ್ಲಿ ಕಾಮಗಾರಿ ಪೂರ್ಣಗೊಳ್ಳದ ಪಂಚಾಯ್ತಿಗಳ ಹೆಸರು ನೀಡಿ. ಕಳೆದ ಬಾರಿ ನದಿ ನೀರಿನ ಮಟ್ಟ ಕಡಿಮೆ ಇದ್ದು, ನಗರದ ತ್ಯಾಜ್ಯ ಸೇರಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿತ್ತು. ಈಗ ನೀರಿನ ಪ್ರಮಾಣ ಹೆಚ್ಚಿದ್ದು, ಕ್ಲೋರಿನೇಶನ್ ಕುರಿತು ಎಚ್ಚರವಹಿಸಿರಿ ಎಂದು ಆರ್‌ಡಿಪಿಆರ್ ಎಇಇ ಬಸವರಾಜ ಅಯ್ಯನಗೌಡರ ಗೆ ಶಾಸಕ ಸೂಚಿಸಿದರು.

ಮಳೆಯಿಂದ ಹಾನಿಗೊಳಗಾದ ತೋಟಗಾರಿಕಾ ಬೆಳೆಗೆ ಪರಿಹಾರ ನೀಡಲಾಗಿದೆಯೇ ? ನೀಡಿದ್ದರೆ ಪ್ರಮಾಣ ಮತ್ತು ಕ್ಷೇತ್ರ ವಿವರಿಸಿರೆಂದು ತೋಟಗಾರಿಕಾ ಸಿಬ್ಬಂದಿಯನ್ನು ವಿಚಾರಿಸಿದರು. ಕೃಷಿ ಸಹಾಯಕ ನಿರ್ದೇಶಕ ಎಸ್.ವಿ. ಪಾಟೀಲರಿಗೆ ‘ತಾಲೂಕಿನಾದ್ಯಂತ ಬಿತ್ತನೆ ಮಾಡಿದ ಬೀಜಗಳು ಹುಸಿ ಹೋದ ಕುರಿತು ಸಮೀಕ್ಷೆ ನಡೆದಿದೆಯೇ? ಯೂರಿಯಾ ಗೊಬ್ಬರದ ಕೊರತೆಗೆ ಕಾರಣಗಳೇನು ? ಕೃಷಿ ಉಪಕರಣಗಳು ಜನರಿಗೆ ತಲುಪಿದ ಕುರಿತು ಮಾಹಿತಿ ಪಡೆದರು.

370 ಅಂಗನವಾಡಿ, ಮಕ್ಕಳ, ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ, ಕೌಟುಂಬಿಕ ಕಲಹ ಹಾಗೂ 10 ಬಾಲ್ಯವಿವಾಹ ತಡೆಹಿಡಿದಿದ್ದು 1 ಪ್ರಕರಣ ದಾಖಲಾಗಿದೆ ಎಂದು ಸಿಡಿಪಿಓ ಅಮೃತ ಸಾಣಿಕೊಪ್ಪ ಸಭೆಗೆ ತಿಳಿಸಿದರು.

ಪಕ್ಕದ ತಾಲ್ಲೂಕುಗಳ ಜನರು ಕೂಡ ಸವದತ್ತಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಹೆಚ್ಚಿನ ಔಷಧ ಸಂಗ್ರಹಿಸಿ ಇಟ್ಟುಕೊಳ್ಳಿ. ವಿಶೇಷವಾಗಿ ನಾಯಿ ಕಡಿತಕ್ಕೆ ಹಾಗೂ ಹಾವಿನ ಕಡಿತಕ್ಕೆ ಔಷಧ ಸಂಗ್ರಹಿಸಿ ಇಟ್ಟುಕೊಳ್ಳಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ  ಶ್ರೀಪಾದ ಸಬನೀಸ್ ಹಾಗೂ ಮುಖ್ಯ ವೈದ್ಯಕೀಯ ಅಧಿಕಾರಿ ಎಚ್.ಎಂ. ಮಲ್ಲನಗೌಡ್ರ ಅವರಿಗೆ ಸೂಚಿಸಿದರು. 

ಇದಕ್ಕೂ ಮೊದಲು ಸರ್ಕಾರಿ ಆದರ್ಶ ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಎಸ್‌.ಡಿ.ಎಂ.ಸಿ ಅಧ್ಯಕ್ಷ ಸುರೇಶ ಕಾಳಪ್ಪನವರ ಶಾಸಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ, ಪಿಐ ಧರ್ಮಾಕರ ಧರ್ಮಟ್ಟಿ, ಇಓ ಆನಂದ ಬಡಕುಂದ್ರಿ, ಯರಗಟ್ಟಿ ತಹಶೀಲ್ದಾರ್‌ ಎಂ.ವ್ಹಿ. ಗುಂಡಪ್ಪಗೋಳ, ಬಿಇಒ ಮೋಹನ ದಂಡಿನ, ಆರ್.ಎಸ್. ಕದಮ್, ಮೈತ್ರಾದೇವಿ ವಸ್ತ್ರದ, ಎಂ.ಮಲ್ಲಪ್ಪ, ಶಂಕರಗೌಡ ರೇಣ್ಕಿಗೌಡ್ರ, ಆರ್.ಎಫ್.ಓ. ಸಂಜೀವ ಸಂಶುದ್ಧಿ, ವಿಜಯ ಸಂಗಪ್ಪಗೋಳ, ಶಿವು ರಾಠೋಡ, ಪ್ರವೀಣ ರಾಮಪ್ಪನವರ, ನೀಹಾ ತೊರಗಲ್ಲ, ಆರ್.ಆರ್. ಕುಲಕರ್ಣಿ ಹಾಗೂ ಇಲಾಖಾಧಿಕಾರಿಗಳು ಇದ್ದರು.

ಭಾಗಿಯಾದ ವಿವಿಧ ಇಲಾಖೆಗಳ ಅಧಿಕಾರಿಗಳು ಹಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಬಿತ್ತನೆ ಬೀಜದ ಮಾಹಿತಿ ಪಡೆದ ಶಾಸಕ
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಿಸಬೇಕಾಗಿದೆ. ಸ್ಥಳ ಪರಿಶೀಲಿಸಿ
ವಿಶ್ವಾಸ್‌ ವೈದ್ಯ ಶಾಸಕ

ನೋಟಿಸ್‌ ನೀಡಲು ಸೂಚನೆ

ತಾಲ್ಲೂಕು ಆಡಳಿತದ ಪ್ರಗತಿ ಪರಿಶೀಲನಾ ಸಭೆಗೆ 59 ರ ಪೈಕಿ 27 ಇಲಾಖೆ ಮಾತ್ರ ಮಾಹಿತಿ ಸಲ್ಲಿಸಿವೆ. ಉಳಿದವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಾರೆಯೇ? ಗೈರಾದ ಮಾಹಿತಿ ನೀಡದವರಿಗೆ ನೋಟಿಸ್ ನೀಡಿ ಎಚ್ಚರಿಕೆಯ ಕ್ರಮ ಜರುಗಿಸಬೇಕೆಂದು ಶಾಸಕ ವಿಶ್ವಾಸ್‌ ವೈದ್ಯ ಅವರು ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.