
ಬೆಳಗಾವಿ: ‘ಸನಾತನ ಹಿಂದೂ ಧರ್ಮದ ಸಂಸ್ಕೃತಿ, ತತ್ವಗಳು ಮಾದರಿಯಾಗಿವೆ. ಹೀಗಾಗಿ ಹಿಂದೂ ಧರ್ಮ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಧರ್ಮವಾಗಿದೆ’ ಎಂದು ಬೆಂಗಳೂರು ಗವಿಪುರಂ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠ ಸಮಾಜದ ಸದ್ಗುರು ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.
ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಇಲ್ಲಿನ ಖಡೇ ಬಜಾರ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಹಿಂದೂ ಧರ್ಮದಲ್ಲಿ ಎಲ್ಲರಿಗೂ ಗೌರವ, ರಕ್ಷಣೆ ಸಿಗುತ್ತದೆ. ಧರ್ಮ ಮನುಷ್ಯನ ಜೀವನವನ್ನು ಶುದ್ಧಗೊಳಿಸುತ್ತದೆ. ಸನಾತನ ಧರ್ಮ ಶಾಶ್ವತವಾಗಿದೆ. ಭಗವದ್ಗೀತೆಯಲ್ಲಿ ಧರ್ಮ ರಕ್ಷಣೆಯ ಸಾಮರ್ಥ್ಯವಿದೆ. ಅದರಲ್ಲಿನ ಪ್ರತಿಯೊಂದು ಅಧ್ಯಾಯ ಜೀವನಕ್ಕೆ ದಾರಿ ತೋರುತ್ತದೆ’ ಎಂದರು.
‘ಸನಾತನ ಧರ್ಮವನ್ನೇ ಮೈಗೂಡಿಸಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರು ಶತ್ರುಗಳ ಸ್ತ್ರೀಯರಿಗೂ ಗೌರವ ನೀಡುತ್ತಿದ್ದರು. ಹೀಗಾಗಿಯೇ 399 ವರ್ಷ ಕಳೆದರೂ ಛತ್ರಪತಿ ಶಿವಾಜಿ ಮಹಾರಾಜರ ಬದುಕಿನ ಶಿಸ್ತು, ಗುಣಗಳು ಇಂದಿಗೂ ಸ್ಮರಣಿಯವಾಗಿವೆ’ ಎಂದರು.
ನಿವೃತ್ತ ಪ್ರಾಚಾರ್ಯೆ ಅರುಣಾ ನಾಯಕ ಮಾತನಾಡಿ, ‘ಹಿಂದೂ ಧರ್ಮದ ಮೇಲೆ ಸಾಕಷ್ಟು ಅನ್ಯಾಯ, ದೌರ್ಜನ್ಯಗಳು ನಡೆದಿವೆ. ಹೀಗಾಗಿ ಧರ್ಮ ರಕ್ಷಣೆಗಾಗಿ ನಮ್ಮ ಪೂರ್ವಜರು ಪ್ರಾಣತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬರಲ್ಲಿ ದೇಶಭಕ್ತಿ ಇರಬೇಕು. ನಮ್ಮ ಸಂಸ್ಕೃತಿ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದರು.
ಶಿವಚರಿತ್ರಕಾರ ಶಿವರತ್ನ ಶೇಟೆ, ಸಮಿತಿ ಅಧ್ಯಕ್ಷ ದಿಗಂಬರ ಪವಾರ, ಉಪಾಧ್ಯಕ್ಷ ಕಿಶೋರಿ ಕುರಣಿ, ಅನಿಲ್ ಅಷ್ಟೇಕರ, ಗೌತಮಿ ಜಾಧವ, ಪ್ರಕಾಶ ಹಲಗೇಕರ್, ಸೀಮಾ ತಿಳವೆ, ಗಜಾನನ ಮಿಸಾಲೆ, ಗಂಗಧರ ಪಾಟೀಲ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.