ADVERTISEMENT

ಬೆಳಗಾವಿ| ಚಳಿಗಾಲದ ಅಧಿವೇಶನ; ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:19 IST
Last Updated 7 ಡಿಸೆಂಬರ್ 2025, 4:19 IST
<div class="paragraphs"><p>ಅಧಿವೇಶನಕ್ಕೆ ನಿಯೋಜನೆಗೊಂಡ ಪೊಲೀಸ್‌ ಸಿಬ್ಬಂದಿಗೆ ಬೆಳಗಾವಿಯ ಪೊಲೀಸ್‌ ಪರೇಡ್ ಮೈದಾನದಲ್ಲಿ ಶನಿವಾರ ಕರ್ತವ್ಯ ನಿಯೋಜನೆ ಮಾಡಲಾಯಿತು</p></div>

ಅಧಿವೇಶನಕ್ಕೆ ನಿಯೋಜನೆಗೊಂಡ ಪೊಲೀಸ್‌ ಸಿಬ್ಬಂದಿಗೆ ಬೆಳಗಾವಿಯ ಪೊಲೀಸ್‌ ಪರೇಡ್ ಮೈದಾನದಲ್ಲಿ ಶನಿವಾರ ಕರ್ತವ್ಯ ನಿಯೋಜನೆ ಮಾಡಲಾಯಿತು

   

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜಿಲ್ಲಾಡಳಿತದಲ್ಲಿ ಗಡಿಬಿಡಿ ಕೆಲಸಗಳು ಸಾಗಿವೆ. ವಸತಿ, ಊಟ, ನೀರು, ವಾಹನ, ಇಂಟರ್ನೆಟ್‌, ಸುರಕ್ಷತೆ ಸೇರಿದಂತೆ ಎಲ್ಲ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ವಿವಿಧ ಉಪ ಸಮಿತಿಗಳು ಶನಿವಾರ ಕೂಡ ನಿರಂತರ ಸಭೆ– ಸಿದ್ಧತೆಗಳಲ್ಲೇ ಮುಳುಗಿದವು.

ದೆಹಲಿಯಲ್ಲಿ ಭಯೋತ್ಪಾದಕರು ಬಾಂಬ್‌ ಸ್ಫೋಟಿಸಿದ ಕಾರಣ ಈ ಬಾರಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ. ಕನಿಷ್ಠ 6,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ತಿಳಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರ ಸಂಖ್ಯೆಯನ್ನು 8,000ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ₹21 ಕೋಟಿ ವೆಚ್ಚವನ್ನು ಇಡೀ ಅಧಿವೇಶನಕ್ಕೆ ನಿಗದಿ ಮಾಡಿದ್ದರೆ ಇದರಲ್ಲಿ ₹5 ಕೋಟಿಯನ್ನು ಕೇವಲ ಭದ್ರತೆಗಾಗಿ ನಿಗದಿ ಮಾಡಲಾಗಿದೆ.

ADVERTISEMENT

ಶನಿವಾರ ಮೊದಲ ತಂಡದ ಪೊಲೀಸ್‌ ಅಧಿಕಾರಿಗಳಿಗೆ ಕರ್ತವ್ಯ ನಿಯೋಜನೆ ಮಾಡಲಾಯಿತು. ಈಗಾಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪೊಲೀಸರು ಬಂದು ವರದಿ ಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.

ಇಂದು ಸಿದ್ದರಾಮಯ್ಯ ವಾಸ್ತವ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿಯೇ ಅಂದರೆ; ಡಿ.7ರಂದೇ ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸುವ ಅವರು ಅಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಧ್ಯಾಹ್ನ 3.30ಕ್ಕೆ ಸುವರ್ಣ ವಿಧಾನಸೌಧಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸಲಿದ್ದಾರೆ.

ಯಾವುದೇ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿಲ್ಲ. ಆದರೆ, ಅಧಿವೇಶನಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಭಾನುವಾರ ಬೆಳಗಾವಿಯಲ್ಲೇ ವಸತಿ ಮಾಡಲಿದ್ದಾರೆ. ಕಾರಣ ಈಗಾಗಲೇ ಅಧಿಕಾರಿ ವಲಯದಲ್ಲಿ ಚಡಪಡಿಕೆ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.