
ಜೈಲು (ಪ್ರಾತಿನಿಧಿಕ ಚಿತ್ರ)
*
ಬೆಳಗಾವಿ: ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ, 12 ಮಂದಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ಇಲ್ಲಿನ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.
ಬಸಪ್ಪ ರುದ್ರಪ್ಪ ನಾಯಿಕ, ರಾಜು ರುದ್ರಪ್ಪ ನಾಯಿಕ, ಕೆಂಪಣ್ಣ ರಾಜು ನಾಯಿಕ, ಪಾರ್ವತಿ ಬಸಪ್ಪ ನಾಯಿಕ, ಯಲ್ಲವ್ವ ರುದ್ರಪ್ಪ ನಾಯಿಕ, ಲಕ್ಕಪ್ಪ ರಾಜು ನಾಯಿಕ, ಗಂಗವ್ವ ಬಸಪ್ಪ ವಾಲಿಕಾರ, ಸಂಗೀತಾ ಸದಾಶಿವ ಹೆಗ್ಗನಾಯಿಕ, ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜು ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ, ಶಿವಪ್ಪ ರಾಯಪ್ಪ ವನ್ನೂರಿ ಶಿಕ್ಷೆಗೆ ಒಳಗಾದವರು.
ಇನ್ನೋರ್ವ ಬಾಲಾಪರಾಧಿ ಕುರಿತು ವಿಚಾರಣೆ ಮುಂದವರಿದಿದೆ.
2023ರ ಡಿಸೆಂಬರ್ 11ರಂದು ಈ ಘಟನೆ ನಡೆದಿತ್ತು. ತಾನು ಪ್ರೀತಿಸಿದ ಯುವತಿಯೊಂದಿಗೆ ಯುವಕ ಮನೆಯಿಂದ ಓಡಿಹೋಗಿದ್ದ. ಇದರಿಂದ ಸಿಟ್ಟಾದ ಯುವತಿ ಕುಟುಂಬಸ್ಥರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಯುವಕನ ಮನೆಯನ್ನೂ ಧ್ವಂಸಗೊಳಿಸಿದ್ದರು. ಈ ಪ್ರಕರಣ ಇಡೀ ದೇಶದಲ್ಲಿ ಗಮನಸೆಳೆದಿತ್ತು. ಮಹಿಳೆ ಮೇಲೆ ಕ್ರೌರ್ಯ ಮೆರೆದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಕುರಿತಾಗಿ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಗಾಗಿ ಈ ಪ್ರಕರಣವನ್ನು 2023ರ ಡಿ.16ರಂದು ಸಿಐಡಿಯ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ವಹಿಸಲಾಗಿತ್ತು. ಆಗ ಸಿಐಡಿ ವಿಶೇಷ ವಿಚಾರಣೆ ವಿಭಾಗದ ಪೊಲೀಸ್ ಅಧೀಕ್ಷಕರಾಗಿದ್ದ ಪೃಥ್ವಿಕ್ ಶಂಕರ್ ಅವರು ತನಿಖಾಧಿಕಾರಿಯಾಗಿ ಕೆಲಸ ಮಾಡಿ, 2024ರ ಏಪ್ರಿಲ್ 22ರಂದು 12 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 92 ಸಾಕ್ಷಿದಾರರನ್ನು ಉಲ್ಲೇಖಿಸುವ ಜತೆಗೆ, ವಶಕ್ಕೆ ಪಡೆದ 37 ವಸ್ತುಗಳನ್ನು ಸಾಕ್ಷ್ಯಗಳನ್ನಾಗಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್.ಎಸ್.ಮಂಜುನಾಥ ಅವರು, 12 ಮಂದಿ ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ಪ್ರಮಾಣ ಇಂದು ಕಾಯ್ದಿರಿಸಿದ್ದರು. ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು.
ಸರ್ಕಾರಿ ವಿಶೇಷ ಅಭಿಯೋಜಕ ಎಲ್.ಎಸ್. ಸುಳ್ಳದ ವಾದ ಮಂಡಿಸಿದ್ದರು.
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದ ಹಾಲ್‌ನಲ್ಲಿ ಆರೋಪಿಗಳು ಮತ್ತು ಅವರ ಕುಟುಂಬಸ್ಥರು ಕಣ್ಣೀರು ಹಾಕಿದರು.
ಭಾರತೀಯ ದಂಡಸಂಹಿತೆಯ ಕಲಂ 34, 37, 109, 114, 117, 143, 147, 148, 149, 307, 323, 324, 326, 341, 342, 326, 353, 354, 354(ಬಿ), 355, 392, 427, 452, 504, 506 ಹಾಗೂ ಕಲಂ 2(ಎ) ಆಸ್ತಿ ನಾಶ ಕಾಯ್ದೆ ಅಡಿ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.