ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಎದುರಿಗೆ ಮಂಗಳವಾರ ತಡರಾತ್ರಿ ಮಹಿಳೆಯೊಬ್ಬರನ್ನು ಕಬ್ಬಿಣದ ಸಲಾಖೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣವನ್ನು ಐದೇ ತಾಸಿನಲ್ಲಿ ಪೊಲೀಸರು ಭೇದಿಸಿದ್ದಾರೆ.
ಸದಾಶಿವ ನಗರದ ನಿವಾಸಿ ಮಹಾದೇವಿ ಬಾಗಪ್ಪ ಕರೆನ್ನವರ(42) ಕೊಲೆಯಾದವರು. ಶ್ರೀನಗರದ ಸಂತೋಷ ಜಾಧವ (38) ಕೊಲೆ ಮಾಡಿದ ಆರೋಪಿ.
ಮೆಸ್‌ನಲ್ಲಿ ಕೆಲಸ ಮಾಡುವ ಮಹಾದೇವಿ ಮಂಗಳವಾರ ತಡರಾತ್ರಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಹಿಂದಿನಿಂದ ಬಂದ ವ್ಯಕ್ತಿ ಕಬ್ಬಿಣದ ಸಲಾಖೆಯಿಂದ ತಲೆಗೆ ಬಲವಾಗಿ ಹೊಡೆದ. ಗಂಭೀರ ಗಾಯಗೊಂಡ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು.
ಹಿರಿಯ ಪೊಲೀಸ್ ಅಧಿಕಾರಿಗಳು ರಾತ್ರಿಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಎಫ್ಎಸ್ಎಲ್ ತಂಡದ ಸಿಬ್ಬಂದಿ ಹಾಗೂ ಶ್ವಾನದಳ ಕೂಡ ಪರಿಶೀಲಿಸಿತು.
‘ಮಹಾದೇವಿ ಹಾಗೂ ಆಟೊರಿಕ್ಷಾ ಚಾಲಕನಾಗಿರುವ ಸಂತೋಷ ಪರಸ್ಪರ ಪರಿಚಿತರು. ಕಳೆದ ವರ್ಷ ಮಹಾದೇವಿ ಅವರು, ಸಂತೋಷಗೆ ₹10 ಸಾವಿರ ಸಾಲ ನೀಡಿದ್ದರು. ಆ ಮೊತ್ತ ಬೇಗ ಮರಳಿಸದ್ದರಿಂದ ಇಬ್ಬರ ಮಧ್ಯೆ ಜಗಳವಾಗಿತ್ತು. ಇದೇ ಕಾರಣಕ್ಕೆ ಮಂಗಳವಾರ ರಾತ್ರಿ 11.10ಕ್ಕೆ ಸಂತೋಷನು ಮಹಾದೇವಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ವಿವಿಧ ಸುಳಿವು ಮತ್ತು ತಾಂತ್ರಿಕ ಸಾಕ್ಷ್ಯಾಧಾರ ಆಧರಿಸಿ ವೀರಭದ್ರ ನಗರದಲ್ಲಿ ಐದೇ ತಾಸಿನಲ್ಲಿ ಆರೋಪಿ ಬಂಧಿಸಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಸುದ್ದಿಗಾರರಿಗೆ ತಿಳಿಸಿದರು.
‘ಕೊಲೆಗೆ ಬಳಸಲಾದ ಸಲಾಖೆ ಅನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ. ಸಂತೋಷನು ಮಹಾದೇವಿ ಕಡೆ ನಡೆದುಕೊಂಡು ಹೋಗುತ್ತಿರುವ ಸಿ.ಸಿ.ಟಿ.ವಿ ದೃಶ್ಯಾವಳಿ ಸಿಕ್ಕಿವೆ. ಪ್ರಕರಣದಲ್ಲಿ ಸಾಕಷ್ಟು ಪುರಾವೆಗಳು ಲಭ್ಯವಿವೆ. ವಿಚಾರಣೆ ನಂತರ ಆರೋಪಿಗೆ ಶಿಕ್ಷೆಯಾಗುವ ವಿಶ್ವಾಸವಿದೆ’ ಎಂದರು.
ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ನಾರಾಯಣ ಭರಮನಿ ಇದ್ದರು. ಎಪಿಎಂಸಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.