
ಬೆಳಗಾವಿ: ಸಮೀಪದ ರಾಣಿ ಚನ್ನಮ್ಮ ಮೃಗಾಲಯಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಭೇಟಿ ನೀಡಿ, ಕೃಷ್ಣಮೃಗಗಳ ಸಾವಿನ ಕುರಿತು ವಿವರ ಪಡೆದರು. ಮೃಗಾಲಯದ ಪ್ರಾಣಿಗಳ ಪಾಲನೆ– ಪೋಷಣೆ ಬಗ್ಗೆ ಪರಿಶೀಲನೆ ನಡೆಸಿ, ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷ್ಣ ಮೃಗಕ್ಕೆ ಬಂದ ಈ ಕಾಯಿಲೆ ಬೇರೆ ಪ್ರಾಣಿಗಳಿಗೆ ತಗಲುವ ಸಾಧ್ಯತೆ ಇದ್ದರೆ, ಮುಂಜಾಗೃತೆಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ ಎಂದು ಸಚಿವ ಸೂಚಿಸಿದರು. ಈ ಸೋಂಕು ಬೇರೆ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಸ್ಪಷ್ಟನೆ ನೀಡಿದರು.
ಬೆಂಗಳೂರಿನಿಂದ ಬಂದ ನುರಿತ ವೈದ್ಯರ ತಂಡ ಮೃಗಾಯದಲ್ಲಿ ಕೃಷ್ಣಮೃಗಗಳ ಚಿಕಿತ್ಸೆ ನೀಡಿದೆ. ಈ ಕಾಯಿಲೆ ಬಗ್ಗೆ ಪ್ರಯೋಗಾಲಯದಿಂದ ವರದಿ ಕೂಡ ಪಡೆಯಲಾಗಿದೆ. ಸದ್ಯ ಇರುವ ಹುಲಿ, ಸಿಂಹ ಸೇರಿದಂತೆ ಇನ್ನುಳಿದ ಪ್ರಾಣಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿ ಪ್ರಾಣಿಗಳ ಆರೋಗ್ಯ ಕಾಪಾಡಲು ಎಲ್ಲ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಬೆಳಗಾವಿ ಎಸಿಎಫ್ ನಾಗರಾಜ ಬಾಳೇಹೂಸೂರ, ಕರ್ನಾಟಕ ಮೃಗಾಯದ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್, ಸಿಸಿಎಫ್ ಮಂಜುನಾಥ ಚವ್ಹಾಣ, ಡಿಸಿಎಫ್ ಎನ್.ಇ. ಕ್ರಾಂತಿ, ವೈದ್ಯರಾದ ಪ್ರಯಾಗ್ ಹಾಗೂ ಮೃಗಾಲಯದ ಸಿಬ್ಬಂದಿ ಇದ್ದರು.
ದ್ರಾವಣ ಸಿಂಪಡಣೆ: ಬ್ಯಾಕ್ಟೀರಿಯಾ ರೋಗಾಣುಗಳು ಮೃಗಾಲಯದ ಇತರ ಭಾಗಗಳಿಗೂ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದರ ಭಾಗವಾಗಿ ಇಡೀ ಮೃಗಾಲಯಕ್ಕೆ ಮಂಗಳವಾರ ರೋಗಾಣು ನಾಶಕ ದ್ರಾವಣದ ಸ್ಯಾನಿಟೈಜೇಷನ್ ಮಾಡಲಾಗಿದೆ. ಕೃಷ್ಣಮೃಗಗಳು ಇರುವ ಜಾಗ, ಅದರ ಪಕ್ಕದ ವಿಭಾಗ ಹಾಗೂ ಹಕ್ಕಿಗಳು ಇರುವ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲಾಯಿತು.
ಮೃಗಾಲಯ ಪ್ರವೇಶಕ್ಕೆ ಯಾವುದೇ ತರಹದ ನಿರ್ಬಂಧ ಹೇರಿಲ್ಲ. ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಆದರೆ, ಒಳಗೆ ಪ್ರವೇಶಿಸುವ ಎಲ್ಲರನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಹೊರಗಿನಿಂದ ಯಾವುದೇ ವಾಹನ ಬಂದರೂ ಅಥವಾ ಹೋದರೂ ಸ್ಯಾನಿಟೈಜೇಷನ್ ಕಡ್ಡಾಯಗೊಳಿಸಲಾಗಿದೆ.
ಮೃಗಾಲಯದ ಪ್ರವೇಶವಿದ್ದರೂ ಕಳೆದ ಐದಾರು ದಿನಗಳಿಂದ ಹೆಚ್ಚಿನ ಜನ ಇದರತ್ತ ಸುಳಿದಿಲ್ಲ.
ಗಳಲೆ ರೋಗ (ಹೆಮರೈಜಿಕ್ ಸೆಪ್ಟೀಸಿಮಿಯಾ) ಬ್ಯಾಕ್ಟೀರಿಯಾ ಸೋಂಕು ಬಹಳ ಅಪಾಯಕಾರಿ. ತಗಲಿದ 24 ಗಂಟೆಯೊಳಗೇ ಪ್ರಾಣಿಗಳು ಸಾಯುವ ಸಾಧ್ಯತೆ ಹೆಚ್ಚುಸುನೀಲ ಪನ್ವಾರ್ ಸದಸ್ಯ ಕಾರ್ಯದರ್ಶಿ ಕರ್ನಾಟಕ ಮೃಗಾಲಯ ಪ್ರಾಧಿಕಾರ
ಏಳೂ ಕೃಷ್ಣಮೃಗಗಳು ಸುರಕ್ಷಿತ
ಕಳೆದ 48 ಗಂಟೆಗಳಿಂದ ಮೃಗಾಲಯದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಇದರಿಂದ ಅರಣ್ಯಾಧಿಕಾರಿಗಳು ಹಾಗೂ ಮೃಗಾಲಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಹೆಮರೈಜಿಸ್ ಸೆಪ್ಟೀಸಿಮಿಯಾ (ಗಳಲೆ ರೋಗ) ತಗಲಿದ್ದು ಬದುಕಿರುವ ಏಳೂ ಕೃಷ್ಣಮೃಗಗಳು ಮಂಗಳವಾರ ಕೂಡ ಲವಲವಿಕೆಯಿಂದ ಓಡಾಡಿಕೊಂಡಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ‘ಬದುಕಿ ಉಳಿದ ಕೃಷ್ಣಮೃಗಗಳಿಗೂ ಸೋಂಕು ತಗಲಿದ್ದು ಖಾತ್ರಿಯಾಗಿದೆ. ನ. 13ರಿಂದಲೇ ಅವುಗಳಿಗೆ ಚಿಕಿತ್ಸೆ ನೀಡುತ್ತಿದ್ದು ಆರೋಗ್ಯ ಸ್ಥಿರವಾಗಿದೆ. ಅವು ಅಪಾಯದಿಂದ ಪಾರಾಗಲಿ ಎಂಬುದೇ ನಮ್ಮೆಲ್ಲರ ಉದ್ದೇಶ’ ಎಂದರು. ‘ಮಂಗಳವಾರ ಕೂಡ ನಾನು ಖುದ್ದಾಗಿ ಮೃಗಾಲಯ ಪರಿಶೀಲನೆ ಮಾಡಿದ್ದೇನೆ. ಆರಂಭದಲ್ಲಿ ನಾವು ಅನುಮಾನಿಸಿದಂತೆಯೇ ಎಲ್ಲ ಕೃಷ್ಣಮೃಗಗಳ ಸಾವಿಗೂ ಎಚ್‌ಎಸ್ (ಹೆಮರೈಜಿಕ್ ಸೆಪ್ಟೀಸಿಮಿಯಾ) ಬ್ಯಾಕ್ಟೀರಿಯಾ ಕಾರಣವಾಗಿದೆ. ಬನ್ನೇರುಘಟ್ಟದ ಪ್ರಯೋಗಾಲಯ ವರದಿ ಇದನ್ನು ಖಚಿತಪಡಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.