ADVERTISEMENT

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್‌ ಮೇಲೆ ಕೈದಿಯಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 13:27 IST
Last Updated 15 ಡಿಸೆಂಬರ್ 2024, 13:27 IST
ಹಿಂಡಲಗಾ ಕೇಂದ್ರ ಕಾರಾಗೃಹ (ಸಂಗ್ರಹ ಚಿತ್ರ)
ಹಿಂಡಲಗಾ ಕೇಂದ್ರ ಕಾರಾಗೃಹ (ಸಂಗ್ರಹ ಚಿತ್ರ)   

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್‌ ಜಿ.ಆರ್‌.ಕಾಂಬಳೆ ಅವರ ಮೇಲೆ ವಿಚಾರಣಾಧೀನ ಕೈದಿ ಶಾಹೀದ್‌ ಖುರೇಶಿ ಹಲ್ಲೆ ನಡೆಸಿದ ಕುರಿತು ಮುಖ್ಯ ಅಧೀಕ್ಷಕ ಕೃಷ್ಣಮೂರ್ತಿ ಅವರು, ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಡಿ.11ರಂದು ಜಿ.ಆರ್‌.ಕಾಂಬಳೆ ಜೈಲಿನಲ್ಲಿ ರೌಂಡ್ಸ್‌ ಹಾಕುತ್ತಿದ್ದರು. ಬ್ಯಾರಕ್‌ ಸಂಖ್ಯೆ 8ರ ಹಿಂಭಾಗದ ಗೋಡೆ ಪಕ್ಕ ಜಾಮರ್‌ ಕೇಬಲ್‌ ಅಳವಡಿಕೆಗಾಗಿ ಅಗೆದ ಗುಂಡಿಯಲ್ಲಿ ಪ್ಲಾಸ್ಟಿಕ್‌ನಿಂದ ಸುತ್ತಿದ ಪ್ಯಾಕೇಟ್‌ ಅವರಿಗೆ ಸಿಕ್ಕಿತು. ಅದನ್ನು ಮುಖ್ಯ ಅಧೀಕ್ಷಕರಿಗೆ ತೋರಿಸಲು ಹೊರಟಾಗ, ಶಾಹೀದ್‌ ಅಡ್ಡಿಪಡಿಸಿದ. ಅವರನ್ನು ತಳ್ಳಾಡಿ ಹಲ್ಲೆ ಮಾಡಿದ. ಪ್ಯಾಕೇಟ್‌ ಕಸಿದುಕೊಂಡು ಓಡಿಹೋಗಿ ಹೊರಕ್ಕೆ ಎಸೆದ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.   

ಈ ಪ್ರಕರಣದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಲ್ಲಿರುವ ಕೈದಿಗಳಿಗೆ ಹೊರಗಡೆಯಿಂದ ಪ್ಯಾಕೇಟ್‌ಗಳಲ್ಲಿ ಮಾದಕವಸ್ತು ಪೂರೈಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.