ಬೆಳಗಾವಿ ಎಪಿಎಂಸಿಗೆ ಬುಧವಾರ ಬಂದಿದ್ದ ಈರುಳ್ಳಿ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ಒಂದೆಡೆ ಅತಿವೃಷ್ಟಿಯಿಂದ ರಾಜ್ಯದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಮತ್ತೊಂದೆಡೆ ಜಮೀನಿನಲ್ಲಿ ಉಳಿದ ಅಷ್ಟಿಷ್ಟು ಬೆಳೆಗೂ ಉತ್ತಮ ದರ ಸಿಗುತ್ತಿಲ್ಲ. ಹೀಗಾಗಿ ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿಸಲು ಸರ್ಕಾರದಿಂದ ಕೇಂದ್ರಗಳನ್ನು ತೆರೆಯಬೇಕೆಂಬ ಬೇಡಿಕೆ ಹೆಚ್ಚಿದೆ.
‘ಹೆಸರು, ಉದ್ದು, ಸೂರ್ಯಕಾಂತಿ ಮಾದರಿಯಲ್ಲೇ, ಈರುಳ್ಳಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು. ಕೆಜಿಗೆ ₹50 ದರ ನೀಡಬೇಕು’ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಒತ್ತಾಯಿಸಿದ್ದಾರೆ.
₹100ರಿಂದ ₹1,200 ದರ
ಬೆಳಗಾವಿ ಎಪಿಎಂಸಿಗೆ ಬುಧವಾರ 15,991 ಕ್ವಿಂಟಲ್ ಈರುಳ್ಳಿ ಆವಕವಾಗಿದೆ. ಹುಬ್ಬಳ್ಳಿ ಎಪಿಎಂಸಿಗೆ ನಿತ್ಯ ಆವಕದ ಪ್ರಮಾಣ 12 ಸಾವಿರ ಕ್ವಿಂಟಲ್ ಇದೆ. ರಾಜ್ಯದಲ್ಲಿ ಬೆಳೆದ ಈರುಳ್ಳಿ ದರ ಎರಡೂ ಎಪಿಎಂಸಿಗಳಲ್ಲಿ ಬುಧವಾರ ₹100 ರಿಂದ ₹ 1,200 ರವರೆಗೆ ಇತ್ತು.
ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿ (ಹಳೇಗಡ್ಡೆ) ದರ ಮಾತ್ರ ಕ್ವಿಂಟಲ್‌ಗೆ ₹500ರಿಂದ ₹1,800ರವರೆಗೆ ಇದೆ. ಕಳೆದ ವರ್ಷ ಇದೇ ವೇಳೆ ಈರುಳ್ಳಿ ಕ್ವಿಂಟಲ್‌ಗೆ ₹ 500 ರಿಂದ ₹4,200 ದರಕ್ಕೆ ಮಾರಾಟವಾಗಿತ್ತು.
‘ಮಹಾರಾಷ್ಟ್ರದಲ್ಲಿ ಬೇಸಿಗೆಯಲ್ಲಿ ಬೆಳೆದಿದ್ದ ಈರುಳ್ಳಿಯದ್ದು ಹೇರಳ ಸಂಗ್ರಹವಿದೆ. ಅಲ್ಲಿಂದ ವಿವಿಧ ರಾಜ್ಯಗಳ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ಬಾಂಗ್ಲಾದೇಶಕ್ಕೆ ರಫ್ತು ನಿಂತಿದ್ದರಿಂದ ರಾಜ್ಯದ ಈರುಳ್ಳಿಗೆ ಬೇಡಿಕೆ ಕುಸಿದಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್.ಗುರುಪ‍್ರಸಾದ ತಿಳಿಸಿದರು.
‘ಹಿಂದಿನ ವರ್ಷ ಎಕರೆಗೆ 100 ಚೀಲ (ತಲಾ 50 ಕೆಜಿ) ಇಳುವರಿ ಬಂದಿತ್ತು. ಈ ಸಲ ಅತಿವೃಷ್ಟಿಯಿಂದ 35 ಚೀಲ ಇಳುವರಿ ಬಂದಿದೆ. ಅದಕ್ಕೂ ಉತ್ತಮ ಧಾರಣೆ ಸಿಗುತ್ತಿಲ್ಲ’ ಎಂದು ಬಾಗಲಕೋಟೆ ಜಿಲ್ಲೆಯ ಯಂಡಿಗೇರಿಯ ರೈತ ತಿರುಪತಿ ಮಾದರ ತಿಳಿಸಿದರು.
‘₹2 ಲಕ್ಷ ವ್ಯಯಿಸಿ 10 ಎಕರೆಯಲ್ಲಿ ಈರುಳ್ಳಿ ಬೆಳೆದಿರುವೆ. ಸಾಮಾನ್ಯ ದಿನಗಳಲ್ಲಿ 1,000 ಚೀಲಗಳಷ್ಟು (ತಲಾ 50 ಕೆಜಿ) ಇಳುವರಿ ಬರುತ್ತಿತ್ತು. ಈ ಬಾರಿ ಅತಿವೃಷ್ಟಿಯಿಂದ ನಿರೀಕ್ಷಿತ ಫಸಲು ಬಂದಿಲ್ಲ’ ಎಂದು ರಾಮದುರ್ಗ ತಾಲ್ಲೂಕಿನ ಸಾಲಾಪುರದ ರೈತ ಮಂಜುನಾಥ ತೋಟಗಟ್ಟಿ ಹೇಳಿದರು.
ಬೆಳಗಾವಿ ಎಪಿಎಂಸಿಗೆ ಬುಧವಾರ ಬಂದಿದ್ದ ಈರುಳ್ಳಿ
ಬೆಳಗಾವಿ ಜಿಲ್ಲೆಯಲ್ಲಿ 3310 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಈಗ ಉಳಿದ ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ- ಮಹಾಂತೇಶ ಮುರಗೋಡ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ
ಕ್ವಿಂಟಲ್‌ಗೆ ₹2 ಸಾವಿರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾದರೆ ಮಾತ್ರ ನಮಗೆ ಅನುಕೂಲ. ಈಗ ಕ್ವಿಂಟಲ್‌ಗೆ ₹600ರಿಂದ ₹700ಕ್ಕೆ ಮಾರುತ್ತಿದೆಮಂಜುನಾಥ ತೋಟಗಟ್ಟಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.