ADVERTISEMENT

ಬೆಳಗಾವಿ | ಕಬ್ಬಿಗೆ ₹5,500 ದರ: ಕಾಲಾವಕಾಶ ಕೇಳಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 0:09 IST
Last Updated 12 ಡಿಸೆಂಬರ್ 2025, 0:09 IST
<div class="paragraphs"><p>ಬೆಳಗಾವಿಯ ಅಲಾರವಾಡ ಸೇತುವೆ ಬಳಿ ರೈತರು ಗುರುವಾರ ಪ್ರತಿಭಟಿಸಿದರು&nbsp; </p></div>

ಬೆಳಗಾವಿಯ ಅಲಾರವಾಡ ಸೇತುವೆ ಬಳಿ ರೈತರು ಗುರುವಾರ ಪ್ರತಿಭಟಿಸಿದರು 

   

ಪ್ರಜಾವಾಣಿ ಚಿತ್ರ

ಬೆಳಗಾವಿ: ‘ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ₹3,500, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ₹1,000 ಸೇರಿಸಿ ಒಟ್ಟು ₹5,500 ದರ ನೀಡಬೇಕು’ ಎಂದು ಆಗ್ರಹಿಸಿ ಇಲ್ಲಿನ ರೈತರು ಗುರುವಾರ ಬೃಹತ್‌ ಪ್ರತಿಭಟನೆ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಸು ಕಾಲಾವಕಾಶ ಕೇಳಿದ್ದರಿಂದ ಪ್ರತಿಭಟನೆ ಹಿಂಪಡೆದರು.

ADVERTISEMENT

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತರು ಸುವರ್ಣ ವಿಧಾನಸೌಧದ ಬಳಿ ಇಡೀ ದಿನ ಪ್ರತಿಭಟಿಸಿದರು. ಸ್ಥಳಕ್ಕೆ ಬಂದು ಮನವಿ ಪಡೆದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ‘ನಿಮ್ಮ ಬೇಡಿಕೆಗಳ ಕುರಿತಾಗಿ ಸಿ.ಎಂ ಸಿದ್ದರಾಮಯ್ಯ ಚರ್ಚಿಸುವರು. ಸೌಧಕ್ಕೆ ಬ‌ನ್ನಿ’ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಅಧ್ಯಕ್ಷ ಚೂನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಐವರು ಮುಖಂಡರು ಮುಖ್ಯಮಂತ್ರಿ ಬಳಿ ಹೋಗಿ, ಚರ್ಚಿಸಿದರು.

‘ನಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸುವೆ. ಶೀಘ್ರವೇ ಒಂದು ನಿರ್ಧಾರಕ್ಕೆ ಬರುವೆ. ಸ್ವಲ್ಪ ಕಾಲಾವಕಾಶ ಕೊಡಲು ಕೇಳಿದ್ದಾರೆ’ ಎಂದು ಚೂನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಎಲ್ಲ ಕಾರ್ಖಾನೆಗಳಲ್ಲಿ ಸರ್ಕಾರವೇ ಡಿಜಿಟಲ್‌ ತೂಕದ ಯಂತ್ರ ಅಳವಡಿಸಬೇಕು. ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿಗೆ ಮುಖ್ಯಸ್ಥರಾಗಿ ಐಎಎಸ್‌ ಅಧಿಕಾರಿ ನೇಮಿಸಬೇಕು. ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ 12 ತಾಸು ತ್ರಿಫೇಸ್‌ ವಿದ್ಯುತ್‌ ನೀಡಬೇಕು, ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಖರೀದಿಗೆ ನಿಗದಿಪಡಿಸಿರುವ ಮಿತಿ ಪ್ರಮಾಣ ಹಚ್ಚಿಸಬೇಕು. ರಾಜ್ಯದಲ್ಲಿ ಹೆಚ್ಚಿನ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಹಾಗಾಗಿ ಹಾಲಿನ ಖರೀದಿ ದರ ಹೆಚ್ಚಿಸಬೇಕೆಂದು ಕೋರಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.